ರಾಯಚೂರು: 2021 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಎಂಟು ಹಂತಗಳಲ್ಲಿ 2,682 ಫಲಾನುಭವಿಗಳಿಗೆ 3 ಕೋಟಿ 19 ಲಕ್ಷ ರೂ.ಗಳ ಇನ್ಪುಟ್ ಸಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ ಆಧಾರ್ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ.
ಸರ್ಕಾರದ ನಿರ್ದೇಶನದಂತೆ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರವಾಹ ಅಥವಾ ಅಕಾಲಿಕ ಮಳೆ ಸಂದರ್ಭದಲ್ಲಿ ಬೆಳೆ ಹಾನಿಯಾಗಿರುವ ರೈತರ ಮಾಹಿತಿಯನ್ನು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡಿರುವ ಒಂಬತ್ತನೆ ಹಂತದ 9,334 ರೈತರಿಗೆ 6,31,50,219 ರೂ.ಗಳ(6.31 ಕೋಟಿ) ಇನ್ಪುಟ್ ಸಬ್ಸಿಡಿಯನ್ನು ಜಮೆ ಮಾಡಲು ಅನುಮೊದನೆ ನೀಡಲಾಗಿದ್ದು, ಅತೀ ಶೀಘ್ರದಲ್ಲಿ ಸರ್ಕಾರದಿಂದ ನೇರವಾಗಿ ಆಧಾರ ಸಂಖ್ಯೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನವನ್ನು ಜಮೆ ಮಾಡಲಾಗುವುದು.
ಬಾಕಿ ಉಳಿದ ರೈತರ ಮಾಹಿತಿಯನ್ನು ಭೂಮಿ ಪರಿಹಾರ ತಂತ್ರಾಂಶದಲ್ಲಿ ದಾಖಲು ಮಾಡುವುದು ಪ್ರಗತಿ ಹಂತದಲ್ಲಿದ್ದು, ಹಂತ ಹಂತವಾಗಿ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್ ಅವರು ತಿಳಿಸಿದ್ದಾರೆ.