ಬೆಂಗಳೂರು: ರಾಜ್ಯ ಸರ್ಕಾರ ಎಲ್ಲಾ ರೈತರಿಗೂ ಬರ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಎಲ್ಲಾ ರೈತರಿಗೂ ಬರ ಪರಿಹಾರ ನೀಡಲು ಆಧಾರ್ ಸಂಖ್ಯೆ ಜೋಡಣೆಯ ಕುಂಟು ನೆಪ ಹೇಳದೆ ರೈತರ ಖಾತೆಗಳಿಗೆ ಕೂಡಲೇ 2000 ರೂ. ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈಗಾಗಲೇ 69 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ಆರ್ಥಿಕ ಸ್ಥಿತಿ ಮರೆಮಾಚಲು ತಾಂತ್ರಿಕ ನೆಪ ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ರಾಜ್ಯದಲ್ಲಿ ಬಹುತೇಕ ತಾಲೂಕು ಬರ ಪೀಡಿತ ಎಂದು ಘೋಷಣೆಯಾಗಿದೆ. ರಾಜ್ಯ ಸರ್ಕಾರ ಬರ ನಿರ್ವಹಣೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಆರು ತಿಂಗಳಾದರೂ ಕಾಮಗಾರಿ ಆರಂಭಿಸಿಲ್ಲ. ಈಗ ಆಧಾರ್ ಜೋಡಣೆ ನೆಪ ಹೇಳಿ ರೈತರನ್ನು ವಂಚಿಸಲಾಗುತ್ತಿದೆ ಎಂದು ದೂರಿದ್ದಾರೆ.