ಚಿಕ್ಕಮಗಳೂರು: ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರು ಆತ್ಮಹತ್ಯೆಯಂತ ದುಡುಕಿನ ನಿರ್ಧಾರ ಕೈಗೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಮಳೆ ಕೈಕೊಟ್ಟ ಕಾರಣಕ್ಕೆ ಸಾಲ ಮಾಡಿ ಬೆಳೆದ ಬೆಳಗಳು ಕೈಗೆ ಸಿಗುತ್ತಿಲ್ಲ. ಒಂದೆಡೆ ಬೆಳೆ ನಾಶವಾಗಿ ಜೀವನ ನಡೆಸುವುದೇ ದುಸ್ಥರವಾಗಿರುವಾಗ ಇನ್ನೊಂದೆಡೆ ಸಾಲಗಾರರ ಕಾಟ ಅನ್ನದಾತನನ್ನು ಇನ್ನಷ್ಟು ಕಂಗೆಡುವಂತೆ ಮಾಡುತ್ತಿದೆ.
ರೈತ ಮಹಿಳೆಯೊಬ್ಬರು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಂಗಲಿ ಗ್ರಾಮದಲ್ಲಿ ನಡೆದಿದೆ.
64 ವರ್ಷದ ದೇವೀರಮ್ಮ ಆತ್ಮಹತ್ಯೆ ಮಾಡಿಕೊಂಡವರು. ದೇವೀರಮ್ಮ ಕಡೂರಿನ ಗ್ರಾಮೀಣ ಕೂಟ ಫೈನಾನ್ಸ್ ನಿಂದ 78 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಆರ್ಥಿಕ ಸಂಕಷ್ಟದ ಜೊತೆಗೆ ಮುಂಗಾರು ಕೈಕೊಟ್ಟ ಕಾರಣಕ್ಕೆ ಬೆಳೆನಾಶವೂ ಉಂಟಾಗಿದೆ. ಒಂದು ತಿಂಗಳು ಸಾಲದ ಕಂತು ತೀರಿಸಲು ಸಾಧ್ಯವಾಗಿಲ್ಲ.
ಫೈನಾನ್ಸ್ ಸಿಬ್ಬಂದಿ ಪ್ರತಿ ವಾರ ದೇವಿರಮ್ಮ ಮನೆ ಬಳಿ ಬಂದು ಕಿರುಕುಳ ನೀಡಲು ಆರಂಭಿಸಿದ್ದರಂತೆ. ಕಂತು ತುಂಬುವಂತೆ ಬೈದಾಡಿದ್ದಾರೆ. ಸಿಬ್ಬಂದಿಗಳ ಕಿರುಕುಳಕ್ಕೆ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಟ ಫೈನಾನ್ಸ್ ಸಿಬ್ಬಂದಿ ಶಂಕರ್ ನಾಯಕ್, ಉಷಾ, ರುಬೀನಾ ವಿರುದ್ಧ ಕಡೂರು ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.