ಚಿತ್ರದುರ್ಗ: ಯುಗಾದಿ ಹಬ್ಬದ ಸಂದರ್ಭದಲ್ಲಿ ರೈತರ ಖಾತೆಗೆ ಬೆಳೆ ವಿಮೆ ಪರಿಹಾರ ಜಮಾ ಮಾಡಲಾಗುತ್ತಿದ್ದು, ರೈತರಿಗೆ ಸ್ವಲ್ಪ ನೆಮ್ಮದಿ ತಂದಿದೆ.
ತೀವ್ರ ಬರ ಪರಿಸ್ಥಿತಿಯಿಂದಾಗಿ ಬೆಳೆ ಹಾನಿಗೊಳಗಾದ ರೈತರಿಗೆ 2023 -24ನೇ ಸಾಲಿನ ಪ್ರಧಾನ ಮಂತ್ರಿ ಬೆಳೆ ವಿಮೆ ಪರಿಹಾರ ಮೊತ್ತವನ್ನು ರೈತರ ಖಾತೆಗಳಿಗೆ ಪಾವತಿಸಲಾಗುತ್ತಿದೆ. ಕಳೆದ ಮುಂಗಾರು ಅವಧಿಯಲ್ಲಿ ಮೆಕ್ಕೆಜೋಳ, ಶೇಂಗಾ ಮೊದಲಾದ ಆಯಾ ಪ್ರದೇಶದ ಪ್ರಮುಖ ಬೆಳೆಗಳಿಗೆ ವಿಮೆ ಕಂತು ಪಾವತಿಸಿದ ರೈತರ ಖಾತೆಗಳಿಗೆ ಮೂರ್ನಾಲ್ಕು ದಿನಗಳಿಂದ ಪರಿಹಾರದ ಮೊತ್ತವನ್ನು ಜಮಾ ಮಾಡಲಾಗುತ್ತಿದೆ.
ಬರಗಾಲದಿಂದ ಕಂಗೆಟ್ಟಿದ್ದ ರೈತರಿಗೆ ಯುಗಾದಿ ಹೊತ್ತಲ್ಲಿ ವಿಮೆ ಪರಿಹಾರ ಮೊತ್ತ ಜಮಾ ಮಾಡುತ್ತಿರುವುದು ಕೊಂಚ ನೆಮ್ಮದಿ ತಂದಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ವಿಮೆ ಕಂತು ಪಾವತಿಸಿದ್ದ ರೈತರಿಗೆ 284 ಕೋಟಿ ರೂ. ಪರಿಹಾರ ಮೊತ್ತ ಬಿಡುಗಡೆಯಾಗಿದ್ದು, ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.