
ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸಾಹಳ್ಳಿ ಗ್ರಾಮದಲ್ಲಿ ಸಾಲ ಬಾಧೆ ತಾಳದೆ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಬ್ಬೆಗೌಡ(65) ಆತ್ಮಹತ್ಯೆ ಮಾಡಿಕೊಂಡ ರೈತ. ಸುಮಾರು 3 ಎಕರೆ ಜಮೀನು ಹೊಂದಿದ್ದ ಸುಬ್ಬೇಗೌಡ ವ್ಯವಸಾಯಕ್ಕಾಗಿ ಬ್ಯಾಂಕ್, ಕೃಷಿ ಸಹಕಾರಿ ಸಂಘ ಮತ್ತು ಖಾಸಗಿಯಾಗಿ ಸುಮಾರು 5 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಸಾಲ ಬಾಧೆಯಿಂದ ನೊಂದಿದ್ದ ಸುಬ್ಬೇಗೌಡ ಕಳೆದ ಸೋಮವಾರ ತಮ್ಮ ಜಮೀನಿನಲ್ಲಿಯೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾರೆ. ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.