ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕೆಲವು ಕಡೆ ಧಾರಾಕಾರವಾಗಿ, ಮತ್ತೆ ಕೆಲವು ಕಡೆ ಸಾಧಾರಣ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆಗೆ ರೈತರು ಜಮೀನು ಹಸನು ಮಾಡಿಕೊಳ್ಳತೊಡಗಿದ್ದಾರೆ.
ಹತ್ತಿ, ಎಳ್ಳು ಸೇರಿದಂತೆ ಕೆಲವು ಬೆಳೆಗಳನ್ನು ಮೇ ಕೊನೆಯ ವಾರ ಇಲ್ಲವೇ ಜೂನ್ ಮೊದಲ ವಾರಗಳಲ್ಲಿ ಬಿತ್ತನೆ ಮಾಡುವುದರಿಂದ ಇದಕ್ಕಾಗಿ ರೈತರು ಭೂಮಿ ಹಸನು ಮಾಡಿಕೊಳ್ಳತೊಡಗಿದ್ದಾರೆ. ಕೆಲವರು ಟ್ರ್ಯಾಕ್ಟರ್ ಮೂಲಕ ಮತ್ತೆ ಕೆಲವರು ನೇಗಿಲುಗಳ ಮೂಲಕ ಭೂಮಿ ಉಳುಮೆ ಮಾಡತೊಡಗಿದ್ದಾರೆ. ಜಮೀನುಗಳಲ್ಲಿ ಕಸ ಕಡ್ಡಿಗಳನ್ನು ತೆಗೆದು ಬಿತ್ತನೆಗಾಗಿ ಭೂಮಿಯನ್ನು ಸಿದ್ಧಪಡಿಸಿಕೊಳ್ಳತೊಡಗಿದ್ದಾರೆ.
ಬಿಕೋ ಎನ್ನುತ್ತಿದ್ದ ಹೊಲಗಳಲ್ಲೀಗ ಜನ, ಎತ್ತುಗಳು, ಬೇಸಾಯದ ಸದ್ದು ಕೇಳಿ ಬರುತ್ತಿದೆ. ಬರಗಾಲದಿಂದ ಬಸವಳಿದಿದ್ದ ರೈತರಿಗೆ ಮಳೆಯಾಗಿರುವುದು ಖುಷಿ ತಂದಿದ್ದು, ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಕೃಷಿ ಕಾರ್ಯಕ್ಕೆ ಬೇಕಾದ ಸಲಕರಣೆಗಳನ್ನು ಸಿದ್ಧ ಮಾಡಿಕೊಂಡು ಹೊಲದತ್ತ ಮುಖ ಮಾಡಿದ್ದಾರೆ.