ಬೆಂಗಳೂರು: ದೇಶಾದ್ಯಂತ ರೈತರು, ಕಾರ್ಮಿಕರನ್ನು ಒಗ್ಗೂಡಿಸಿ ಸಂಘಟನೆ ಬಲಪಡಿಸಲು ಸಂಯುಕ್ತ ಕಿಸಾನ್ ಮೋರ್ಚಾ ಮುಂದಾಗಿದೆ.
ರೈತರ ಎಲ್ಲಾ ಸಾಲ ಸಂಪೂರ್ಣ ಮನ್ನಾ ಮಾಡಬೇಕು. ರೈತರಿಗೆ ಮಾಸಿಕ 10 ಸಾವಿರ ರೂಪಾಯಿ ಪಿಂಚಣಿ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಬೃಹತ್ ಹೋರಾಟ ರೂಪಿಸಲು ತಯಾರಿ ನಡೆಸಲಾಗಿದೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ದಕ್ಷಿಣ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ಎಲ್ಲಾ ರಾಜ್ಯಗಳಲ್ಲಿಯೂ ಸಂಘಟನೆಯನ್ನು ಬಲಪಡಿಸುವುದು ಮತ್ತು ಮುಂದಿನ ಹೋರಾಟದ ಕುರಿತಾಗಿ ಚರ್ಚೆ ನಡೆಸಲಾಗಿದೆ.
ಸಭೆಯಲ್ಲಿ ಮಾತನಾಡಿದ ರೈತ ನಾಯಕ ದರ್ಶನ್ ಪಾಲ್ ಅವರು, ಕೊರೋನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳು ಬಂಡವಾಳಶಾಹಿಗಳ ಪರವಾಗಿದ್ದವು. ಇದನ್ನು ವಿರೋಧಿಸುವಂತೆ ಮಾಡಿದ ಮನವಿಗೆ ರೈತರು ಸ್ಪಂದಿಸಿದರು. ಬಿಜೆಪಿ ಸರ್ಕಾರ, ಅಂಬಾನಿ, ಅದಾನಿ ಅವರಿಗೆ ಹಾಕಿದ ಬಹಿಷ್ಕಾರದಿಂದ ಇಡೀ ಉತ್ತರ ಭಾರತ ಕೇಂದ್ರ ಸರ್ಕಾರದ ವಿರುದ್ಧ ನಿಂತಿತು ಎಂದು ಹೇಳಿದ್ದಾರೆ.
ರಾಷ್ಟ್ರದ ಎಲ್ಲಾ ಜಿಲ್ಲೆಗಳಲ್ಲಿಯೂ ರೈತರನ್ನು ಸಂಘಟಿಸುವ ಮೂಲಕ ಇಡೀ ದೇಶದಲ್ಲಿ ಒಗ್ಗಟ್ಟು ಸ್ಥಾಪಿಸಲು ಸಂಯುಕ್ತ ಕಿಸಾನ್ ಮೋರ್ಚಾ ಶ್ರಮಿಸುತ್ತಿದೆ. ರೈತರು ಮತ್ತು ಕಾರ್ಮಿಕರು ಒಗ್ಗೂಡಿ ಪರಸ್ಪರ ಸಹಕಾರದಿಂದ ಹೋರಾಟ ಮಾಡಿದಾಗ ಮಾತ್ರ ಬದಲಾವಣೆ ಸಾಧ್ಯವಾಗುತ್ತದೆ. ಮುಂದಿನ ದಿನಗಳಲ್ಲಿ ರೈತರು ಮತ್ತು ಕಾರ್ಮಿಕರು ಒಗ್ಗೂಡಿಸಿ ಹೋರಾಟ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ಹೇಳಿದ್ದಾರೆ.