ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನಾನಿರತನಾಗಿದ್ದ ರೈತ ದೆಹಲಿಯ ಸಿಂಘು ಗಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತ ರೈತನನ್ನು ಪಂಜಾಬ್ನ ಅಮ್ರೋಹ್ ಜಿಲ್ಲೆಯ ನಿವಾಸಿ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.
ಮೃತ ಗುರುಪ್ರೀತ್ ಸಿಂಗ್, ಭಾರತೀಯ ಕಿಸಾನ್ ಸಂಘಟನೆಯ ಜಗ್ಜೀತ್ ಸಿಂಗ್ ದಲ್ಲೆವಾಲ್ ಜೊತೆ ನಿಕಟ ಸಂಬಂಧ ಹೊಂದಿದ್ದರು ಎಂದು ತಿಳಿದುಬಂದಿದೆ.
ಕುಂಡ್ಲಿ ಠಾಣಾ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು ತನಿಖೆ ಮುಂದುವರಿಸಿದ್ದಾರೆ. ಈ ಸಾವಿಗೆ ನಿಖರ ಕಾರಣ ಏನು ಎಂಬುದನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ.
ಕಳೆದ ತಿಂಗಳಷ್ಟೇ ಲಖ್ಫೀರ್ ಸಿಂಗ್ ಎಂಬ ಕಾರ್ಮಿಕನ ಶವ ಸಿಂಘು ಗಡಿಯ ಬ್ಯಾರಿಕೇಡ್ಗೆ ಕಟ್ಟಿಡಲಾಗಿತ್ತು. ಮೃತ ಲಖ್ಬೀರ್ ಸಿಂಗ್ ದೇಹದಲ್ಲಿ ಹರಿತವಾದ ಆಯುಧದಿಂದ ಮಾಡಿದ ಗಾಯದ ಕಲೆಗಳು ಪತ್ತೆಯಾಗಿದ್ದವು. ಈ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದರು ಹಾಗೂ ಇನ್ನಿಬ್ಬರು ತಾವೇ ಪೊಲೀಸರಿಗೆ ಶರಣಾಗಿದ್ದರು.
ಸಾವಿರಾರು ರೈತರು ಅದರಲ್ಲೂ ಹೆಚ್ಚಾಗಿ ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶದ ಪಶ್ಚಿಮ ಭಾಗದ ರೈತರು ದೆಹಲಿಯ ಸಿಂಘು ಹಾಗೂ ಟಿಕ್ರಿ ಗಡಿಗಳಲ್ಲಿ ಕಳೆದ ವರ್ಷ ನವೆಂಬರ್ 26ರಿಂದ ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದಾರೆ.