ನವದೆಹಲಿ: ರೈತ ನಾಯಕ ರಾಕೇಶ್ ಟಿಕಾಯತ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ ವಕ್ತಾರರಾಗಿರುವ ರಾಕೇಶ್ ಟಿಕಾಯತ್ ದೆಹಲಿಯ ಗಾಜಿಪುರ ಗಡಿಭಾಗದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಕೆಂಪುಕೋಟೆಯಲ್ಲಿ ಹೋರಾಟಗಾರರು ಧ್ವಜಾರೋಹಣ ನೆರವೇರಿಸಿಲ್ಲ ಎಂದು ರಾಕೇಶ್ ಟಿಕಾಯತ್ ತಿಳಿಸಿದ್ದಾರೆ. ದೆಹಲಿ ಕೆಂಪು ಕೋಟೆಯಲ್ಲಿ ಯಾರಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲೇ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದ್ದಾರೆ.
ನಿಷೇಧಾಜ್ಞೆ ಜಾರಿ:
ಗಾಜಿಪುರ ಗಡಿಯ ಎರಡೂ ಕಡೆ ಪೋಲಿಸರು ಬಂದ್ ಮಾಡಿದ್ದು, ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನಾ ನಿರತ ರೈತರ ತೆರವಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ. ಗಾಜಿಪುರ ಮತ್ತು ಟೆಕ್ರಿ ಗಡಿ ಖಾಲಿ ಮಾಡಲು ಸೂಚನೆ ನೀಡಲಾಗಿದ್ದು, ಗಡಿಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಪೊಲೀಸ್ ಕಾರ್ಯಾಚರಣೆ ಮೂಲಕ ರೈತರನ್ನು ತೆರವುಗೊಳಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇಂದು ರಾತ್ರಿಯೇ ರೈತರನ್ನು ಜಾಗ ಖಾಲಿ ಮಾಡಿಸಲಾಗುವುದು.
33 ಎಫ್ಐಆರ್:
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 33 ಎಫ್ಐಆರ್ ದಾಖಲಿಸಲಾಗಿದೆ. ಜನವರಿ 26 ರಂದು ರೈತರಿಂದ ಟ್ರ್ಯಾಕ್ಟರ್ ವೇಳೆ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 33 ಎಫ್ಐಆರ್ ದಾಖಲಿಸಲಾಗಿದ್ದು, ರೈತ ಮುಖಂಡರು ಸೇರಿ 44 ಜನರಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಇಂಟರ್ ನೆಟ್, ಎಸ್ಎಂಎಸ್ ಸ್ಥಗಿತ:
ದೆಹಲಿಯಲ್ಲಿ ಜನವರಿ 26 ರಂದು ಹಿಂಸಾಚಾರ ನಡೆದ ನಂತರ ಇಂಟರ್ನೆಟ್ ಸೇವೆಯನ್ನು ಹರಿಯಾಣ ಸರ್ಕಾರ ಸ್ಥಗಿತಗೊಳಿಸಿದೆ. ಹರಿಯಾಣದ ಮೂರು ಜಿಲ್ಲೆಗಳಲ್ಲಿ ಇಂಟರ್ನೆಟ್, ಎಸ್ಎಂಎಸ್ ಸೇವೆ ಸ್ಥಗಿತ ಮುಂದುವರಿಸಲಾಗಿದೆ. ನಾಳೆ ಸಂಜೆ 5 ಗಂಟೆಯವರೆಗೆ ಸೋನಿಪತ್, ಪಾಲ್ವಾಲ್ ಮತ್ತು ಜಜ್ಜರ್ ಜಿಲ್ಲೆಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಿ ಹರಿಯಾಣ ಸರ್ಕಾರ ಆದೇಶ ಹೊರಡಿಸಿದೆ.