
ಮೈಸೂರು: ಹೆಜ್ಜೇನು ದಾಳಿಯಿಂದ ರೈತರೊಬ್ಬರು ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಮೇಲೂರು ಗ್ರಾಮದಲ್ಲಿ ನಡೆದಿದೆ.
ಪುಟ್ಟರಾಜು(61) ಮೃತಪಟ್ಟ ರೈತ. ಶನಿವಾರ ಮಧ್ಯಾಹ್ನ ಜಮೀನಿನಲ್ಲಿ ದನ ಮೇಯಿಸುವ ವೇಳೆ ಏಕಾಏಕಿ ಅವರ ಮೇಲೆ ಜೇನುನೊಣಗಳು ದಾಳಿ ನಡೆಸಿದ್ದರಿಂದ ಅವರಿಗೆ ಓಡಿ ಹೋಗಲು ಸಾಧ್ಯವಾಗಿಲ್ಲ. ಅವರ ಕೂಗಾಟ, ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ಪುಟ್ಟರಾಜು ಸಹೋದರ ಬಸವರಾಜು ಮತ್ತು ಅವರ ಸಂಬಂಧಿ ಮಲ್ಲಿಕಾರ್ಜುನ ಅವರು ಕೂಡ ಹೆಜ್ಜೇನು ದಾಳಿಯಿಂದ ಗಾಯಗೊಂಡಿದ್ದಾರೆ. ಮೂವರನ್ನು ಪಿರಿಯಾಪಟ್ಟಣ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಪುಟ್ಟರಾಜು ಮೃತಪಟ್ಟಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.