ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್, ವಿಡಿಯೋ ಶೂಟ್ ಗಳ ಭರಾಟೆ ಜೋರಾಗಿದೆ. ಪ್ರೀ ವೆಡ್ಡಿಂಗ್ ಶೂಟ್ ಗಾಗಿಯೇ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು, ಅದ್ಧೂರಿಯಾಗಿ ಫೋಟೋ ಶೂಟ್ ಮಾಡುವುದು, ಬೇರೆ ಬೇರೆ ಪ್ರವಾಸಿ ತಾಣಗಳಲ್ಲಿ ಕ್ರಿಯೇಟಿವ್ ಆಗಿ ವಿಡಿಯೋ ಮಾಡಿಸುವುದು ಸಾಮಾನ್ಯವಾಗಿಬಿಟ್ಟಿದೆ. ಆದರೆ ಇಲ್ಲೊಂದು ಜೋಡಿ ವಿಭಿನ್ನವಾಗಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಅಪ್ಪಟ ಮಣ್ಣಿನ ಮಗನಂತೆ, ರೈತ ಮಹಿಳೆಯಂತೆ ನವ ವಧು-ವರರು ಸಾಂಪ್ರದಾಯಿಕವಾಗಿ ಹಾಗೂ ತುಂಬಾ ಸರಳ ರೀತಿಯಲ್ಲಿ ಹೊಲದಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಕೃಷಿಕ ಯುವಕರಿಗೆ ಇಂದು ಯಾರೂ ಹೆಣ್ಣು ಕೊಡುತ್ತಿಲ್ಲ, ರೈತ ಯುವಕರನ್ನು ವಿವಾಹವಾಗಲು ಹೆಣ್ಣುಮಕ್ಕಳು ಮುಂದೆ ಬರುತ್ತಿಲ್ಲ ಎಂಬ ಅಳಲು ಕೃಷಿಕ ಕುಟುಂಬದ ಯುವಕರದ್ದು. ಇಂತಹ ಸಂದರ್ಭದಲ್ಲಿ ಈ ನವಜೋಡಿ ಸಾಂಪ್ರದಾಯಿಕ ಕೃಷಿಪದ್ಧತಿಯಲ್ಲಿ ವರ ಹೊಲಗದ್ದೆಗಳಲ್ಲಿ ಉಳುಮೆ ಮಾಡುತ್ತ, ವಧು ಕೃಷಿಕನ ಪತ್ನಿಯಾಗಿ ಬುತ್ತಿ ಹಿಡಿದು ಬರುತ್ತಿರುವ ದೃಶ್ಯ ಇಂದಿನ ಯುವಜನತೆಗೆ ಮಾದರಿಯಾಗಿದೆ. ಹೊಲ-ಗದ್ದೆ, ತೋಟದಲ್ಲಿ ದುಡಿಯುವ ಯುವ ರೈತರು ನಾವೂ ಯಾರಿಗೂ ಕಮ್ಮಿಯಿಲ್ಲ ಎಂಬ ಸಂದೇಶವನ್ನು ಈ ಪ್ರೀ ವೆಡ್ಡಿಂಗ್ ಶೂಟ್ ಮೂಲಕ ರವಾನಿಸಿದಂತಿದೆ. ಯುವ ಜೋಡಿಯ ಈ ವಿಡಿಯೋ ನಿಜಕ್ಕೂ ಹೊಸತನದಿಂದ ಕೂಡಿದೆ.