ಚಿತ್ರದುರ್ಗ: ರೈತರೊಬ್ಬರ ಜಮೀನಿಗೆ ಸಂಬಂಧಿಸಿದ ಪೌತಿ ಖಾತೆ ಮಾಡಿಕೊಡಲು 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಚಿತ್ರದುರ್ಗ ಜಿಲ್ಲೆ ನಲಗೇತನಹಟ್ಟಿ ವೃತ್ತದ ಗ್ರಾಮ ಆಡಳಿತಾಧಿಕಾರಿ ಹರೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹಿರೇಕಾವಲು ಸರ್ವೇ ನಂಬರ್ 127 ರಲ್ಲಿ 6.3 ಎಕರೆ ಜಮೀನು ಕಾರೇಬೋರಯ್ಯ ಎಂಬುವರಿಗೆ ಸೇರಿದ್ದು, ಅವರ ಮಕ್ಕಳದ ಕೆ.ಬಿ. ಚನ್ನಕೇಶವಯ್ಯ, ತಿಪ್ಪೇಸ್ವಾಮಿ ಅವರ ಹೆಸರಿಗೆ ಜಮೀನನ್ನು ಜಂಟಿ ಪೌತಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಲಾಗಿತ್ತು.
ಗ್ರಾಮ ಆಡಳಿತಾಧಿಕಾರಿ ಹರೀಶ್ ಪೌತಿಖಾತೆ ಮಾಡಿಕೊಡಲು ರೈತ ಚನ್ನಕೇಶವಯ್ಯ ಅವರಿದ್ದ 5000 ರೂ. ಮುಂಗಡ ಪಡೆದುಕೊಂಡಿದ್ದರು. ನಂತರ 1500 ರೂಪಾಯಿ ಪಡೆದುಕೊಂಡಿದ್ದವರು. ಮತ್ತೆ 10 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಇದರಿಂದ ನೊಂದ ರೈತ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು, ಬುಧವಾರ ಕಚೇರಿಯಲ್ಲಿ ಖಾಸಗಿ ವ್ಯಕ್ತಿ ಮೂಲಕ 10 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗಲೇ ದಾಳಿ ನಡೆಸಿ ಗ್ರಾಮ ಆಡಳಿತಾಧಿಕಾರಿ ಹರೀಶ್ ಖಾಸಗಿ ವ್ಯಕ್ತಿ ಪಿ.ಸಿ. ಬೋರಯ್ಯ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ.