ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಹೆಡದಾಳು ಬಳಿ ಇಂದು ಬೆಳಗ್ಗೆ ಕಾಡಾನೆ ದಾಳಿಗೆ ಬಲಿಯಾದ ಯುವತಿ ಮೀನಾ ಅವರ ಕುಟುಂಬಕ್ಕೆ ತಕ್ಷಣ 15 ಲಕ್ಷ ರೂ. ಪರಿಹಾರ ಚೆಕ್ ನೀಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಮೂಡಿಗೆರೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಸಿಎಂ, ಪರಿಹಾರ ನೀಡಲು ಸೂಚಿಸಿದ್ದು, ಕಾಡಾನೆಗಳನ್ನು ವಾಪಸ್ ಕಾಡಿಗೆ ಕಳುಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೇಳಿದ್ದಾರೆ.
ಮೀನಾ ಮೃತದೇಹ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದವರ ಜೊತೆ ದೂರವಾಣಿ ಮೂಲಕ ಮಾತನಾಡಿದ ಮುಖ್ಯಮಂತ್ರಿಗಳು, ಕಾಡಾನೆ ಹಾವಳಿ ತಪ್ಪಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಅರಣ್ಯ ಸಚಿವರು ಕೂಡ ಜಿಲ್ಲೆಗೆ ಆಗಮಿಸಿ ರೈಲ್ವೇ ಬ್ಯಾರಿಕೇಡ್ ಅಳವಡಿಕೆ ಸೇರಿ ರಕ್ಷಣಾ ಕ್ರಮಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.