
ಬೆಂಗಳೂರು: ಖಾಸಗಿ ವಿದ್ಯಾಸಂಸ್ಥೆಯ ಮಾಲೀಕನ ಮನೆಗೆ ನುಗ್ಗಿದ ಕಳ್ಳರು 1.50 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಆನೇಕಲ್ ತಾಲೂಕಿನ ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇಡೀ ಕುಟುಂಬದವರು ಪುಣ್ಯಕ್ಷೇತ್ರಗಳಿಗೆ ಪ್ರವಾಸಕ್ಕೆ ಹೋಗಿ ಬಂದ ನಂತರ ಘಟನೆ ಬೆಳಕಿಗೆ ಬಂದಿದೆ. ಖಾಸಗಿ ವಿದ್ಯಾ ಸಂಸ್ಥೆಯ ಮಾಲೀಕ ಶಶಿಧರ್ ಅವರ ಮನೆಯಲ್ಲಿ ನಗದು ಚಿನ್ನಾಭರಣ ದೋಚಲಾಗಿದೆ.
ಶ್ರೀಧರ್ ಕುಟುಂಬ ಸಮೇತರಾಗಿ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದು, ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿದ್ದರು. ಅವರು ಪ್ರವಾಸಕ್ಕೆ ಹೋಗಿರುವುದನ್ನು ಅರಿತ ಕಳ್ಳರ ತಂಡ ಮನೆಯ ಬಾಗಿಲು ಮುರಿದು ನಗದು ಚಿನ್ನಾಭರಣ ದೋಚಿದ್ದು, ಸಿಸಿ ಕ್ಯಾಮೆರಾ ಡಿವಿಆರ್ ಕೂಡ ದೋಚಲಾಗಿದೆ.
ಒಂದು ಕೆಜಿಗೂ ಅಧಿಕ ಚಿನ್ನಾಭರಣ, ಆರು ಕೆಜಿ ಬೆಳ್ಳಿ, 53 ಲಕ್ಷ ನಗದು ಲಾಕರ್ ಸಮೇತ ದೋಚಲಾಗಿದೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.