ನಿಮ್ಮ ಬ್ಯಾಂಕ್ ಖಾತೆಗೆ ಹಠಾತ್ ಕೋಟಿ ರೂಪಾಯಿ ಬಂದರೆ ಏನು ಮಾಡುತ್ತೀರಿ? ಹೆಚ್ಚಿನ ಜನರು ಇಷ್ಟ ಬಂದಿದ್ದನ್ನೆಲ್ಲ ಶಾಪಿಂಗ್ ಮಾಡ್ತಾರೆ. ಬೇಕಾಗಿದ್ದನ್ನೆಲ್ಲ ಕೊಂಡು ತರ್ತಾರೆ. ಆಸ್ಟ್ರೇಲಿಯಾದಲ್ಲೂ ಇಂಥದ್ದೇ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರ ಖಾತೆಗೆ 8 ಸಾವಿರದ ಬದಲು 82 ಕೋಟಿ ರೂಪಾಯಿ ಜಮಾ ಆಗಿತ್ತು.
ಕೋಟಿ ಕೋಟಿ ಹಣ ಸಿಕ್ಕಿದ್ದು ನೋಡಿ ಇಡೀ ಕುಟುಂಬಕ್ಕೆ ಖುಷಿಯೋ ಖುಷಿ. ಎಲ್ಲರೂ ಭರ್ಜರಿ ಶಾಪಿಂಗ್ ಮಾಡಿದ್ದಾರೆ. ಆದ್ರೆ ಈ ಸಂಭ್ರಮ ಹೆಚ್ಚು ದಿನ ಉಳಿಯಲೇ ಇಲ್ಲ. ತಪ್ಪಾಗಿ ಜಾಸ್ತಿ ಹಣ ಹಾಕಿಬಿಟ್ಟಿದ್ದ ಕ್ರಿಪ್ಟೋ ಕಂಪನಿ ಆ ಮೊತ್ತವನ್ನು ಮರಳಿ ಕೇಳಿದೆ.
Crypto.com ನಿಂದ 100 ಡಾಲರ್ ಹಣ ಜಮಾ ಆಗಬೇಕಿತ್ತು. ಆದ್ರೆ 10.4 ಮಿಲಿಯನ್ ಡಾಲರ್ ಹಣ ಪಾವತಿಯಾಗಿಬಿಟ್ಟಿತ್ತು. ಹಣ ನೋಡಿ ಖುಷಿಯಾದ ಇಡೀ ಕುಟುಂಬದವರು ಇಷ್ಟಬಂದಂತೆ ಅದನ್ನು ಖರ್ಚು ಮಾಡಿದ್ದಾರೆ. ತಾನು ಮಾಡಿದ ಪ್ರಮಾದ ಗೊತ್ತಾಗ್ತಿದ್ದಂತೆ ಕ್ರಿಪ್ಟೋ ಹಣವನ್ನು ವಾಪಸ್ ಕೇಳಿದೆ. ಪೂರ್ತಿ ಹಣ ವಾಪಸ್ ಮಾಡದೇ ಇದ್ದರೆ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದೆ.
ಸುಮಾರು 1.35 ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಮೊತ್ತವನ್ನು ಬಡ್ಡಿ ರೂಪದಲ್ಲಿ ಅವರು ಪಾವತಿಸಬೇಕಾಗಿದೆ. ಮೆಲ್ಬೋರ್ನ್‌ನಲ್ಲಿ ನೆಲೆಸಿರುವ ತೇವಮನೋಗಿರಿ ಮಣಿವೇಲ್ ಮತ್ತು ಅವರ ಸಹೋದರಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗಿತ್ತು. ಹೆಚ್ಚುವರಿ ಹಣ ಸಿಂಗಾಪುರ ಮೂಲದ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಿಂದ ಪಾವತಿಯಾಗಿತ್ತು.
Crypto.com ಸುಮಾರು ಏಳು ತಿಂಗಳ ನಂತರ ಆಡಿಟ್ ಸಮಯದಲ್ಲಿ ಈ ಪ್ರಮಾದವನ್ನು ಪತ್ತೆ ಮಾಡಿದೆ. ದುಡ್ಡು ಬಂತು ಅನ್ನೋ ಸಂಭ್ರಮದಲ್ಲಿ ಅದನ್ನೆಲ್ಲ ಖರ್ಚು ಮಾಡಿದ ಕುಟುಂಬವೀಗ ಭಾರೀ ಮೊತ್ತವನ್ನು ವಾಪಸ್ ಮಾಡಬೇಕಾಗಿ ಬಂದಿದೆ.