ಆಸ್ಟ್ರೇಲಿಯಾದ ಡ್ಯಾನಿ ಡುಷಾಟೆಲ್ ಎಂಬ 26 ವರ್ಷದ ಯುವತಿಯೊಬ್ಬರು ಕುಟುಂಬದೊಂದಿಗೆ ಡಿನ್ನರ್ ಸವಿಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆಯೇ ಹೃದಯಸ್ಥಂಭನಗೊಂಡು ಮೃತಪಟ್ಟಿದ್ದಾರೆ.
ಬ್ರಿಸ್ಬೇನ್‌ನ ಮೋರ‍್ಟನ್ ಬೇ ಪ್ರದೇಶದಲ್ಲಿರುವ ಡ್ಯಾನಿ ಮನೆಯಲ್ಲಿ ಮೇ 21ರಂದು ಈ ದುರದೃಷ್ಟಕರ ಘಟನೆ ಜರುಗಿದೆ. ರಾತ್ರಿ 10 ಗಂಟೆ ವೇಳೆ ತನ್ನ ಕುಟುಂಬಸ್ಥರೊಂದಿಗೆ ಡಿನ್ನರ್ ಸವಿಯುತ್ತಾ ಕಾರ್ಡ್ಸ್ ಆಟದ ಸಂತಸದಲ್ಲಿದ್ದ ಡ್ಯಾನಿಯ ಈ ದಿಢೀರ್ ಅಗಲಿಕೆ ಆಕೆಯ ಕುಟುಂಬಸ್ಥರನ್ನು ಶೋಕದ ಕೂಪಕ್ಕೆ ತಳ್ಳಿದೆ.
ಸರ್ಕಾರೀ ಉದ್ಯೋಗಿಯಾಗಿದ್ದ ಡ್ಯಾನಿ ಇತ್ತೀಚೆಗೆ ಕಾಲು ಮುರಿದುಕೊಂಡ ಕಾರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದರಿಂದ ಚೇತರಿಸಿಕೊಳ್ಳಲು ಆಕೆ ತನ್ನ ಕುಟುಂಬಸ್ಥರೊಂದಿಗೆ ಮನೆಗೆ ಬಂದು ನೆಲೆಸಿದ್ದರು.
ಡ್ಯಾನಿಯ ಕಾಲಿಗೆ ಮಾಡಲಾದ ಶಸ್ತ್ರಚಿಕಿತ್ಸೆ ವೇಳೆ ಸಂಭವಿಸಿದ ರಕ್ತ ಹೆಪ್ಪುಗಟ್ಟುವಿಕೆಯ ಕಾರಣ ಪಲ್ಮನರಿ ಎಂಬಾಲಿಸಂ ಆಗಿ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ತಜ್ಞರು ಶಂಕಿಸಿದ್ದಾರೆ.
ಡ್ಯಾನಿ ತಾಯಿ ಕೇ ಡುಷೆಲ್ ತಮ್ಮ ಪುತ್ರಿಗೆ ಈ ವೇಳೆ ಸಿಪಿಆರ್ ಮಾಡಿ ಉಳಿಸಿಕೊಳ್ಳಲು ಯತ್ನಿಸಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ. ಮಗಳ ಸಾವಿನ ಶೋಕವನ್ನು ಫೇಸ್ಬುಕ್‌ನ ಪೋಸ್ಟ್ ಒಂದರ ಮೂಲಕ ಸ್ನೇಹಿತರು ಹಾಗೂ ಬಂಧುಗಳಿಗೆ ಹಂಚಿಕೊಂಡಿದ್ದಾರೆ ಕೇ.
ಡ್ಯಾನಿ ಕುಟುಂಬದ ಸ್ನೇಹಿತೆ ಷಾಂಟೆಲ್ಲೆ ಲೇ ಡ್ಯಾನಿಗಾಗಿ ಗೋಫಂಡ್‌ಮೀ ಅಭಿಯಾನದ ಮೂಲಕ $15,000ಗಳನ್ನು ಸಂಗ್ರಹಿಸಿದ್ದಾರೆ. ಈ ಅಭಿಯಾನದಲ್ಲಿ $20,000 ಸಂಗ್ರಹಿಸಿ ಡ್ಯಾನಿಯ ಕುಟುಂಬಕ್ಕೆ ಈ ಸಂಕಷ್ಟದ ಸಂದರ್ಭದಲ್ಲಿ ನೆರವಾಗಲು ಷಾಂಟೆಲ್ಲೆ ಬಯಸಿದ್ದಾರೆ.