ಒಡಿಶಾದ ಮಲ್ಕನಗಿರಿ ಜಿಲ್ಲೆಯ ನಿಲಿಮಾರಿ ಗ್ರಾಮದ ಕುಟುಂಬವು ಕೆಲವು ವರ್ಷಗಳಿಂದ ತಮ್ಮ ಮನೆಯೊಳಗೆ ನಾಗರಹಾವುಗಳೊಂದಿಗೆ ವಾಸಿಸುತ್ತಿದೆ.
ಅಚ್ಚರಿ ಆದರೂ ಇದು ನೈಜ ಘಟನೆ. ಈವರೆಗೆ ಅವರು ವಿಷಕಾರಿ ಹಾವುಗಳಿಂದ ಯಾವುದೇ ಹಾನಿಗೊಳಗಾಗಿಲ್ಲ ಮತ್ತು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ.
ನಿಲಿಮರಿ ಗ್ರಾಮದ ನೀಲಕಂಠ ಭೂಮಿಯವರ ಬಡ ಕುಟುಂಬ ಇದ್ದ ಮನೆಯಲ್ಲಿ ಮೂರು ಕೊಠಡಿಗಳಿದ್ದು, ಒಂದರಲ್ಲಿ ಗೆದ್ದಲು ಹುತ್ತ ನಿರ್ಮಿಸಿದ್ದವು, ಬಳಿಕ ಒಂದೆರಡು ನಾಗರಹಾವು ಕಂಡುಬಂದ ನಂತರ ಕುಟುಂಬದವರು ಅವುಗಳನ್ನು ಮನೆಯಿಂದ ಹೊರಹಾಕಲಿಲ್ಲ. ಬದಲಾಗಿ ಹಾವುಗಳಿಗೆ ಮನೆಯಲ್ಲಿ ಹಾಲು ಕುಡಿಸಿ ಪೂಜೆ ಸಲ್ಲಿಸಿದರು. ಮೂರು ಕೊಠಡಿಗಳ ಪೆೈಕಿ ಎರಡು ಕೊಠಡಿಗಳನ್ನು ಹಾವುಗಳಿಗೆ ಬಿಟ್ಟು ಸೋಮವಾರ ಮತ್ತು ಗುರುವಾರ ಪೂಜಿಸಲಾಗುತ್ತದೆ. ನೀಲಿಮಾರಿ ಗ್ರಾಮದ ಹಾವಿನ ಮನೆ ಎಂದು ಈಗ ಖ್ಯಾತಿ ಪಡೆದಿದೆ.
ನಾನು ಅವುಗಳನ್ನು ನೋಡಿದ್ದು ಹಾಲು ಕುಡಿಸಿದ್ದೇನೆ. ನನ್ನ ಮದುವೆಯ ನಂತರ ಕುಟುಂಬವು ಪೋಷಿಸುತ್ತಿದೆ, ಸ್ಥಳವನ್ನು ಸ್ವಚ್ಛಗೊಳಿಸುತ್ತಿದೆ. ಅವುಗಳಿಂದ ನಾವು ಯಾವತ್ತೂ ಸಮಸ್ಯೆ ಎದುರಿಸಿಲ್ಲ ಎಂದು ನೀಲಕಂಠ ಭೂಮಿಯಾ ಅವರ ಪುತ್ರಿ ಲಕ್ಷ್ಮೀ ಕಬಸಿ ಹೇಳಿದರು.
ತಜ್ಞರ ಪ್ರಕಾರ ವಿಷಕಾರಿ ಹಾವುಗಳೊಂದಿಗೆ ವಾಸಿಸುವುದು ಅಪಾಯಕಾರಿ. ಹಾವು ಎಂದಿಗೂ ಹಾಲು ಕುಡಿಯುವುದಿಲ್ಲ. ಹಾಗಾಗಿ ವಿಷಪೂರಿತ ಹಾವುಗಳನ್ನು ಮನೆಯಲ್ಲಿಟ್ಟು ಪೂಜಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಷಪೂರಿತ ಹಾವುಗಳನ್ನು ಪೂಜಿಸುವುದು ಕುರುಡು ನಂಬಿಕೆ. ವಿಷಪೂರಿತ ಹಾವುಗಳೊಂದಿಗೆ ಬದುಕುವುದು ಅಪಾಯಕಾರಿ. ಅಪಾಯವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ವಿಚಾರವಾದಿ ದೇಬೇಂದ್ರ ಸುತಾರ್ ಹೇಳಿದ್ದಾರೆ. ಆದರೆ, ಹಾವಿನ ಕುಟುಂಬದ ಬಗ್ಗೆ ಈ ಪ್ರದೇಶದಲ್ಲಿ ಸಾಕಷ್ಟು ಚರ್ಚೆಯಾಗಿದೆ.