ತಿರುಪತಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದ ಮಹಾರಾಷ್ಟ್ರ ಮೂಲದ ಕುಟುಂಬವೊಂದು ಕೋಟ್ಯಂತರ ರೂಪಾಯಿ ಮೌಲ್ಯದ ಭಾರಿ ಚಿನ್ನಾಭರಣಗಳನ್ನು ಧರಿಸಿ ಬಂದಿದ್ದು, ಕುಟುಂಬ ಸದಸ್ಯರ ಮೈಮೇಲಿದ್ದ ಒಡವೆಗಳನ್ನು ಕಂಡು ಲಕ್ಷಾಂತರ ಭಕ್ತರು ಅಚ್ಚರಿಗೊಂಡ ಘಟನೆ ನಡೆದಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಮಹಾರಾಷ್ಟ್ರದ ರತ್ಲಾಮ್ ನಿಂದ ಬಂದಿದ್ದ ಸುಭಾಷ್ ಚಂದ್ರ ಹಾಗೂ ಸೋನಿ ಕುಟುಂಬದವರು ಧರಿಸಿದ್ದ ಚಿನ್ನಾಭರಣಗಳು ತಿರುಪತಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ತೆರಳಿದ್ದ ಭಕ್ತರನ್ನು ನಿಬ್ಬೆರಗಾಗಿಸಿದೆ. ಸುಭಾಷ್ ಚಂದ್ರ ಹಾಗೂ ಅವರ ಕುಟುಂಬದವರು ಧರಿಸಿದ್ದ ಬೃಹತ್ ಚಿನ್ನದ ಹಾರ, ಅದಕ್ಕೆ ವೆಂಕಟೇಶ್ವರ ಹಾಗೂ ಪದ್ಮಾವತಿಯ ವಿಗ್ರಹಗಳು ಇದ್ದು ಆಭರಣಗಳು ಎಲ್ಲರ ಗಮನ ಸೆಳೆದಿವೆ.
ಮೈತುಂಬಾ ಆಭರಣಗಳನ್ನು ಧರಿಸಿ ಬಂದಿದ್ದ ಕುಟುಂಬ ಸದಸ್ಯರನ್ನು ನೋಡಿ ಅಚ್ಚರಿಗೊಂಡ ಹಲವರು ಮೊಬೈಲ್ ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇನ್ನು ಭಾರಿ ಆಭರಣಗಳನ್ನು ಧರಿಸಿ ತಿರುಪತಿ-ತಿರುಮಲ ದರ್ಶನಕ್ಕೆ ಆಗಮಿಸಿದ್ದ ಕುಟುಂಬದವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಇದು ನಮ್ಮ ಕುಟುಂಬದ ಸಂಪ್ರದಾಯ. ಪ್ರತಿವರ್ಷ ವೆಂಕಟೇಶ್ವರನ ವಿಗ್ರಹವಿರುವ ಚಿನ್ನದ ಆಭರಣಗಳನ್ನು ತೊಟ್ಟು ತಿರುಮಲಕ್ಕೆ ಬಂದು ದೇವರ ದರ್ಶನ ಪಡೆಯುತ್ತೇವೆ. ಪೂರ್ವಜರಕಾಲದಿಂದಲೂ ತಿರುಪತಿ ವೆಂಕಟೇಶ್ವರ ಮನೆ ದೇವರಾಗಿ ಪೂಜಿಸುತ್ತಿದ್ದೇವೆ. ಈ ಆಭರಣಗಳನ್ನು ತೊಟ್ಟು ದೇವರ ದರ್ಶನ ಪಡೆಯುವುದು ಪೂರ್ವಜರ ಕಾಲದಿಂದ ನಡೆದುಬಂದ ಸಂಪ್ರದಾಯ ಎಂದು ತಿಳಿಸಿದ್ದಾರೆ.