ಬೆಂಗಳೂರು: ಹಠಕ್ಕೆ ಬಿದ್ದು ಕುಟುಂಬ ಸದಸ್ಯರಿಗೆ ಲೋಕಸಭೆ ಚುನಾವಣೆಯ ಟಿಕೆಟ್ ಪಡೆದುಕೊಂಡ ಸಚಿವರಿಗೆ ಅವರನ್ನು ಗೆಲ್ಲಿಸಿಕೊಳ್ಳಬೇಕಾದ ಸವಾಲು ಎದುರಾಗಿದೆ.
ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ ಬೆಂಗಳೂರು ದಕ್ಷಿಣದಿಂದ ಸ್ಪರ್ಧಿಸಿದ್ದಾರೆ. ಚಿಕ್ಕೋಡಿಯಿಂದ ಸಚಿವ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ಬಾಗಲಕೋಟೆಯಿಂದ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಸ್ಪರ್ಧಿಸಿದ್ದಾರೆ. ಬೀದರ್ ನಿಂದ ಸಚಿವ ಈಶ್ವರ್ ಖಂಡ್ರೆ ಅವರ ಪುತ್ರ ಸಾಗರ್ ಖಂಡ್ರೆ ಸ್ಪರ್ಧಿಸಿದ್ದು, ಬೆಳಗಾವಿ ಕ್ಷೇತ್ರದಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಣಕ್ಕಿಳಿದಿದ್ದಾರೆ.
ದಾವಣಗೆರೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಸಚಿವ ಮಧು ಬಂಗಾರಪ್ಪ ಸಹೋದರಿ ಗೀತಾ ಶಿವರಾಜಕುಮಾರ್ ಸ್ಪರ್ಧಿಸಿದ್ದಾರೆ. ಕಲ್ಬುರ್ಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಭಾವ ರಾಧಾಕೃಷ್ಣ ದೊಡ್ಡಮನಿ ಸ್ಪರ್ಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಅಭ್ಯರ್ಥಿಯಾಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕುಟುಂಬದವರಿಗೆ ಟಿಕೆಟ್ ಪಡೆದುಕೊಂಡ ಸಚಿವರಿಗೆ ಅವರನ್ನು ಗೆಲ್ಲಿಸಲೇಬೇಕಾದ ಜವಾಬ್ದಾರಿ ಇದೆ. ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಕುಟುಂಬ ಸದಸ್ಯರು ಪರಾಭವಗೊಂಡಲ್ಲಿ ಸಚಿವರ ಸ್ಥಾನಕ್ಕೆ ಕುತ್ತು ಬಂದರೂ ಬರಬಹುದು ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆಯಾಗುತ್ತಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಅಳೆದು ತೂಗಿ ಗೆಲುವಿನ ಮಾನದಂಡ ಅನುಸರಿಸಿ ಸಚಿವರ ಕುಟುಂಬದವರಿಗೆ ಮಣೆ ಹಾಕಿದೆ. ವರಿಷ್ಠರು ನೀಡಿದ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ವಿಫಲರಾದರೆ ಸಚಿವರ ತಲೆದಂಡ ನಿಶ್ಚಿತ ಎನ್ನಲಾಗಿದೆ.