ಹುಬ್ಬಳ್ಳಿ: ಅಂಕಿ ಅಂಶಗಳನ್ನು ಮುಚ್ಚಿಟ್ಟು ಅನುದಾನದ ವಿಚಾರದಲ್ಲಿ ಕೇಂದ್ರದ ವಿರುದ್ಧ ರಾಜ್ಯ ಕಾಂಗ್ರೆಸ್ ಸರ್ಕಾರ ಸುಳ್ಳು ಆರೋಪ ಮಾಡುತ್ತಿದೆ ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಿಂದಿನ ಯುಪಿಎ ಸರ್ಕಾರ ನೀಡಿದ್ದ ಅನುದಾನಕ್ಕೆ ಹೋಲಿಸಿದರೆ ಶೇಕಡ 242 ರಷ್ಟು ಹೆಚ್ಚು ಅನುದಾನವನ್ನು ಕರ್ನಾಟಕಕ್ಕೆ ಮೋದಿ ಸರ್ಕಾರ ನೀಡಿದೆ ಎಂದು ತಿಳಿಸಿದ್ದು, ಈ ಕುರಿತಾದ ಅಂಕಿ ಅಂಶಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ.
ಯುಪಿಎ ಸರ್ಕಾರ 10 ವರ್ಷಗಳಲ್ಲಿ ರಾಜ್ಯಕ್ಕೆ 81,795 ಕೋಟಿ ರೂಪಾಯಿ ಅನುದಾನ ನೀಡಿದೆ. ಮೋದಿ ಸರ್ಕಾರ 2,08,832 ಕೋಟಿ ರೂಪಾಯಿ ಅನುದಾನ ನೀಡಿದ್ದು, ಶೇಕಡ 242ರಷ್ಟು ಹೆಚ್ಚು ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಆರ್ಥಿಕ ತಜ್ಞ ಸಿದ್ಧರಾಮಯ್ಯನವರಿಗೆ ಎಲ್ಲಾ ಗೊತ್ತಿದ್ದರೂ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಜನಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆಯಾಗುತ್ತದೆ. ಈ ಹಿಂದೆ ಜನಸಂಖ್ಯೆ ಆಧಾರದಲ್ಲಿ ಅನುದಾನ ಹಂಚಿಕೆಯಾಗುತ್ತಿರಲಿಲ್ಲ. ಕೇಂದ್ರ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಕೇಂದ್ರ ಸರ್ಕಾರ ಯಾವತ್ತೂ ರಾಜಕಾರಣ ಮಾಡಿಲ್ಲ. ಒಂದೂ ಸೀಟು ಇಲ್ಲದ ಕೇರಳಕ್ಕೂ ಸರ್ಕಾರ ಹಣ ಕೊಟ್ಟಿದೆ ಎಂದು ಹೇಳಿದ್ದಾರೆ.