ಮೈಸೂರು: 24 ವರ್ಷಗಳಿಂದ ಅಣ್ಣನ ಹೆಸರಿನಲ್ಲಿ ಕೆಲಸ ಮಾಡಿದ ತಮ್ಮನನ್ನು ಬಂಧಿಸಲಾಗಿದೆ. ಅಮೃತ ಸಹೋದರನ ಹೆಸರಿನಲ್ಲಿ 24 ವರ್ಷ ಸೇವೆ ಸಲ್ಲಿಸಿದ್ದ ಆರೋಪಿಯನ್ನು ಪಿರಿಯಾಪಟ್ಟಣದ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ವಹಿಸಿದೆ.
ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿ ನೇಮಕಗೊಂಡಿದ್ದ ಲೋಕೇಶಗೌಡ ಹೆಸರಿನಲ್ಲಿ ಅವರ ಸಹೋದರ ಲಕ್ಷ್ಮಣಗೌಡ ಕೆಲಸ ಮಾಡುತ್ತಿದ್ದ.
ಲೋಕೇಶಗೌಡ ಶಿಕ್ಷಕ ಹುದ್ದೆಗೆ ನೇಮಕವಾಗಿ ಕೆಲವು ದಿನಗಳ ನಂತರ ಮೃತಪಟ್ಟಿದ್ದು, ಅವರ ನೇಮಕಾತಿ ಪತ್ರ ಸೇರಿ ಎಲ್ಲ ದಾಖಲೆಗಳನ್ನು ಶಿಕ್ಷಣ ಇಲಾಖೆಗೆ ಕೊಟ್ಟ ಲಕ್ಷ್ಮಣಗೌಡ ತಾನೇ ಲೋಕೇಶಗೌಡ ಎಂದು ಬಿಂಬಿಸಿಕೊಂಡಿದ್ದ.
ಮುದ್ದನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1998 ರಲ್ಲಿ ಶಿಕ್ಷಕ ವೃತ್ತಿಗೆ ಸೇರಿ ವಿವಿಧ ಶಾಲೆಗಳಲ್ಲಿ 24 ವರ್ಷ ಕಾರ್ಯ ನಿರ್ವಹಿಸಿದ್ದ. ಕಟ್ಟೆಮಳಲವಾಡಿ ಗ್ರಾಮದ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುವಾಗ ಕುಟುಂಬದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದ ಈ ಸಂಗತಿ ಹೊರಬಿದ್ದಿದೆ. ಸ್ಥಳೀಯ ಪತ್ರಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತ ಇಂಟೆಕ್ ರಾಜು ಮಾಹಿತಿ ಹಕ್ಕು ಕಾಯ್ದೆಯಡಿ ಶಿಕ್ಷಣ ಇಲಾಖೆಗೆ ಅರ್ಜಿ ಸಲ್ಲಿಸಿದ್ದು, ದಾಖಲೆಗಳನ್ನು ಪಡೆದು ನಕಲಿ ಶಿಕ್ಷಕನ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ನಾಲ್ಕು ಹಂತಗಳಲ್ಲಿ ವಿಚಾರಣೆ ನಡೆಸಿ ತನಿಖೆ ಕೈಗೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.