ಬೆಂಗಳೂರು: ವಂಚನೆಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡ ವ್ಯಕ್ತಿಯೊಬ್ಬ ತಾನು ಪೊಲೀಸ್ ಎಂದು ಹೇಳಿಕೊಂಡು ಮಹಿಳಾ ಮಸಾಜ್ ಥೆರಪಿಸ್ಟ್ ಓರ್ವರಿಗೆ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಹೇಂದ್ರ ಕುಮಾರ್ (33) ಬಂಧಿತ ಆರೋಪಿ. ಆರೋಪಿ ಮಹೇಂದ್ರ ಕುಮಾರ್, ತನ್ನ ಹೆಸರು ಸುರೇಶ್ ಎಂದು ಹೇಳಿಕೊಂಡು ಆನ್ ಲೈನ್ ನಲ್ಲಿ ಮಹಿಳಾ ಮಸಾಜ್ ಥೆರಪಿಸ್ಟ್ ಬುಕ್ ಮಾಡಿದ್ದ. ಮಸಾಜ್ ಥೆರಪಿಸ್ಟ್ ಳನ್ನು ರಾಮಮೂರ್ತಿ ನಗರದ ಅಪಾರ್ಟ್ ಮೆಂಟ್ ಬಳಿ ಕರೆಸಿದ್ದ. ಜುಲೈ 3ರಂದು ರಾತ್ರಿ 10:30ಕ್ಕೆ ಮಹಿಳಾ ಥೆರಪಿಸ್ಟ್ ಸ್ಥಳಕ್ಕೆ ಆಗಮಿಸಿದ್ದಾರೆ. ಆಕೆಯನ್ನು ಕಾರಿನಲ್ಲಿ ಕರೆದೊಯ್ದ ವ್ಯಕ್ತಿ ಒಂದು ಕಿ.ಮೀ ಹೋದ ಬಳಿಕ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದ.
ತಾನು ಪೊಲೀಸ್ ಎಂದು ಹೇಳಿ 10 ಲಕ್ಷ ಹಣ ನೀಡಬೇಕು. ಇಲ್ಲವಾದಲ್ಲಿ ಅತ್ಯಾಚಾರವೆಸಗುವುದಾಗಿ ಬೆದರಿಕೆ ಹಾಕಲು ಶುರು ಮಾಡಿದ್ದಾನೆ. ಇದರಿಂದ ಕಂಗಾಲಾದ ಮಹಿಳಾ ಥೆರಪಿಸ್ಟ್ ತನ್ನ ಸ್ನೇಹಿತರಿಗೆ ಕರೆ ಮಾಡಿ ಹಣ ಕೇಳಿದ್ದಾಳೆ. ಮಹಿಳಾ ಥೆರಪಿಸ್ಟ್ ಳಿಂದ ಬರೋಬ್ಬರಿ 1 ಲಕ್ಷದ 50 ಸಾವಿರ ಹಣ ವರ್ಗಾವಣೆ ಮಾಡಿಸಿಕೊಂಡ ಆರೋಪಿ ರಾತ್ರಿಯಿಡಿ ಹೆಬ್ಬಾಳ ಸೇರಿದಂತೆ ಹಲವೆಡೆ ಸುತ್ತಾಡಿಸಿ, ಬೆಳಗಿನ ಜಾವ ಏರ್ ಪೋರ್ಟ್ ಬಳಿ ಆಕೆಯನ್ನು ಬಿಟ್ಟು ನಿನ್ನ ಊರಿಗೆ ನೀನು ಹೋಗಬೇಕು. ಇಲ್ಲವಾದಲ್ಲಿ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ.
ಅಲ್ಲಿಂದ ಬಂದ ಯುವತಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ನಕಲಿ ಪೊಲೀಸ್ ಮಹೇಂದ್ರ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಂಧನದ ಬಳಿಕ ಮಾರತ್ತಹಳ್ಳಿ, ಪುಲಕೇಶಿ ನಗರ ಠಾಣೆಯಲ್ಲಿಯೂ ಈತನ ವಿರುದ್ಧ ಇದೇ ರೀತಿ ವಂಚಿಸಿರುವ ಪ್ರಕರಣ ದಾಖಲಾಗಿದೆ ಎಂಬುದು ಬೆಳಕಿಗೆ ಬಂದಿದೆ.