
ಮಂಡ್ಯ: ಮಂಡ್ಯದಲ್ಲಿ ನಕಲಿ ಸರ್ಕಾರಿ ಅಧಿಕಾರಿಯನ್ನು ಬಂಧಿಸಲಾಗಿದೆ. ಮಂಡ್ಯ ನಗರದ ತಾವರೆಗೆರೆ ನಿವಾಸಿ ಹೆಚ್.ಸಿ. ವೆಂಕಟೇಶ ಬಂಧಿತ ಆರೋಪಿ.
ಮಂಡ್ಯ ಪೂರ್ವ ಠಾಣೆ ಪೊಲೀಸರು ಆರೋಗ್ಯ ವೆಂಕಟೇಶನನ್ನು ಬಂಧಿಸಿದ್ದಾರೆ. ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದ ಎರಡು ಕೋಟಿ ರೂಪಾಯಿಗೂ ಅಧಿಕ ಹಣ ಸುಲಿಗೆ ಮಾಡಿದ್ದ ಆರೋಪಿ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡು ಆರೋಪಿ ವಂಚಿಸುತ್ತಿದ್ದ. ಮುಖ್ಯಮಂತ್ರಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು, ಹಿರಿಯ ಅಧಿಕಾರಿಗಳ ಹೆಸರು, ಸಹಿ ದುರ್ಬಳಕೆ ಮಾಡಿಕೊಂಡ ಆರೋಪ ಈತನ ಮೇಲಿದೆ.
ಹಣ ಕೊಟ್ಟರೆ ಮನೆಗೆ ನಕಲಿ ನೇಮಕಾತಿ ಪತ್ರ ತಂದು ಕೊಡುತ್ತಿದ್ದ. ಅಬಕಾರಿ ಇಲಾಖೆಯಲ್ಲಿ ಚಾಲಕರ ಹುದ್ದೆ ಕೊಡಿಸುವ ಆಮಿಷವೊಡ್ಡಿದ್ದ ಆರೋಪಿ ನಕಲಿ ದಾಖಲೆ ಸೃಷ್ಟಿಸಿ ಮೂವರಿಂದ 45 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ. ಆರೋಪಿ ವೆಂಕಟೇಶ್ ವಿರುದ್ಧ ಮಂಡ್ಯ ಪೂರ್ವ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.
ಅಲ್ಲದೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನೇಕರಿಗೆ ಉದ್ಯೋಗ ನೇಮಕಾತಿ ನಕಲಿ ಪತ್ರ ನೀಡಿದ್ದ ಎನ್ನಲಾಗಿದ್ದು, ಆರೋಪಿ ಬಂಧಿಸಿದ ಪೊಲೀಸರು ಅನೇಕ ದಾಖಲೆಗಳು, ಸೀಲ್, ಲೆಟರ್ ಹೆಡ್ ಗಳು, ಹಾಜರಾತಿ ಪುಸ್ತಕಗಳು, ನಕಲಿ ಐಡಿ ಕಾರ್ಡ್, ಟ್ಯಾಗ್ ಗಳು, ಸರ್ಕಾರದ ಲೋಗೋ ವಶಕ್ಕೆ ಪಡೆದಿದ್ದಾರೆ.