ಯಾದಗಿರಿ: ನಕಲಿ ಅಂಕಪಟ್ಟಿ ನೀಡಿ ವಿವಿಧ ಆಸ್ಪತ್ರೆಗಳಲ್ಲಿ 14 ಜನರು ಡಿ ಗ್ರೂಪ್ ಹುದ್ದೆ ಪಡೆದಿರುವ ಪ್ರಕರಣ 9 ವರ್ಷಗಳ ಬಳಿಕ ಬೆಳಕಿಗೆ ಬಂದಿರುವ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.
2015ರಲ್ಲಿ ನಕಲಿ ಅಂಕಪಟ್ಟಿ ನೀಡಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ 14 ಜನರು ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಡಿ ಗ್ರೂಪ್ ಹುದ್ದೆ ಪಡೆದಿರುವ 14 ಜನರ ಬಗ್ಗೆ ಮಾಹಿತಿ ನೀಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರು ಯಾದಗಿರಿ ಡಿಹೆಚ್ ಒ ಗೆ ಸೂಚನೆ ನೀಡಿದ್ದಾರೆ.
2015ರಲ್ಲಿ ಡಿ ಗ್ರೂಪ್ ಹುದ್ದೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಆಧಾರದ ಮೇಲೆ ನೇಮಕಾತಿ ನಡೆದಿತ್ತು. ಕೌನ್ಸೆಲಿಂಗ್ ಮೂಲಕ ನೇಮಕ ಮಾಡಿಕೊಲ್ಳಲಾಗಿತ್ತು. ಆದರೆ 14 ಜನರು ನಕಲಿ ಅಂಕಪಟ್ಟಿ ನೀಡಿ ನೇಮಕಗೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಗೆ 9 ವರ್ಷಗಳ ಬಳಿಕ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ 14 ಜನರ ಮಾರ್ಕ್ಸ್ ಕಾರ್ಡ್, ಜನ್ಮ ದಿನಾಂಕ, ಆದೇಶ ಪ್ರತಿ, ಸೇವೆಗೆ ಸೇರಿದ ದಿನಾಂಕ ಸೇರಿದಂತೆ ವಿವಿಧ ಮಹಿತಿಗಳನ್ನು ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ತಿಳಿಸಿದೆ.