
ಬೆಂಗಳೂರು: ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ನಕಲಿ ಅಂಕಪಟ್ಟಿ ತಯಾರಿಸಿ ವಿತರಿಸುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರು ಸಿಸಿಬಿ ಆರ್ಥಿಕ ಅಪರಾಧ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ಗುಂಡುಮನಿ (41), ಮೋನಿಇಷ್ ಕೆ.ಜಿ (36) ಹಾಗೂ ರಾಜಶೇಖರ್ (41) ಬಂಧಿತ ಆರೋಪಿಗಳು. ಪಿಯುಸಿಗೆ ದಾಖಲಾಗಿದ್ದ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಬರೆಯದೇಯೇ ಆರೋಪಿಗಳು ಕರ್ನಾಟಕ ರಾಜ್ಯ ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಮಂಡಳಿ ಹೆಸರಲ್ಲಿ ಅಂಕಪಟ್ಟಿ ನೀಡುತ್ತಿದ್ದರು.
ಬೆಂಗಳೂರಿನ ಕತ್ರಿಗುಪ್ಪೆ ರಾಮ್ ರಾವ್ ಲೇಔಟ್ ನಲ್ಲಿರುವ ಅಕಾಡೆಮಿಯೊಂದರಲ್ಲಿ ಪಿಯುಸಿಗೆ ದಾಖಲಾಗಿದ್ದ ವಿದ್ಯಾರ್ಥಿಗಳಿಗೆ ಈ ರೀತಿ ನಕಲಿ ಅಂಕಪಟ್ಟಿ ನೀಡುತ್ತಿದ್ದರು. ವಿದ್ಯಾರ್ಥಿ ಕಡೆಯವರು ಅಂಕಪಟ್ಟಿ ಬಗ್ಗೆ ಅನುಮಾನಗೊಂದು ಪೊಲೀಸರಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ರಾಜ್ಯದ ವಿವಿಧ ಜಿಲೆಗಳಲ್ಲಿ ಅಕಾಡೆಮಿ ತೆರೆದು ವಿದ್ಯಾರ್ಥಿಗಳನ್ನು ಅಡ್ಮಿಶನ್ ಮಾಡಿಸಿಕೊಂಡು ಪರೀಕ್ಷೆ ಇಲ್ಲದೇ ಅಂಕಪಟ್ಟಿ ನೀಡುತ್ತಿದ್ದರು. 5-10 ಸಾವಿರ ಹಣ ಪಡೆದು ನಕಲಿ ಅಂಕಪಟ್ಟಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ.