ಅಹಮದಾಬಾದ್: ನಕಲಿ ವೈದ್ಯರು, ಅಧಿಕಾರಿಗಳು, ಪೊಲೀಸರ ಸೋಗಿನಲ್ಲಿ ವಂಚಿಸುವುದನ್ನು ನೋಡಿರುತ್ತೀರಿ. ಇದೀಗ ಗುಜರಾತ್ ನಲ್ಲಿ ನಕಲಿ ಕೋರ್ಟ್ ನಡೆಸಿದ ಭೂಪನೊಬ್ಬ ಸಿಕ್ಕಿ ಬಿದ್ದಿದ್ದಾನೆ. ಕೋರ್ಟ್, ನ್ಯಾಯಾಧೀಶ, ಸಿಬ್ಬಂದಿ ಎಲ್ಲವೂ ನಕಲಿಯಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಕಚೇರಿಯನ್ನೇ ಕೋರ್ಟ್ ರೀತಿ ಪರಿವರ್ತಿಸಿಕೊಂಡಿದ್ದ ಆರೋಪಿ ತಾವು ನಿಜವಾದ ನ್ಯಾಯಾಲಯದಲ್ಲಿ ಇದ್ದೇವೆ ಎನ್ನುವ ಭಾವನೆ ಜನರಲ್ಲಿ ಮೂಡುವಂತೆ ಮಾಡಿದ್ದ. ಮೋರಿಸ್ ಸ್ಯಾಮುಯೆಲ್ ಕ್ರಿಶ್ಚಿಯನ್ ಬಂಧಿತ ಆರೋಪಿ. 2019 ರಲ್ಲಿ ತನ್ನ ಕಕ್ಷಿದಾರನ ಪರವಾಗಿ ಈತ ಆದೇಶವೊಂದನ್ನು ನೀಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಈ ನಕಲಿ ನ್ಯಾಯಾಲಯ ಕನಿಷ್ಠ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಎನ್ನುವುದು ಗೊತ್ತಾಗಿದೆ. ಸಿವಿಲ್ ನ್ಯಾಯಾಲಯದಲ್ಲಿ ಜಮೀನು ವ್ಯಾಜ್ಯ ಬಾಕಿ ಇದ್ದವರನ್ನು ಮೋರಿಸ್ ಸೆಳೆದು ಅವರಿಂದ ನಿರ್ದಿಷ್ಟ ಮೊತ್ತವನ್ನು ಪ್ರಕರಣ ಬಗೆಹರಿಸಿಕೊಡಲು ಶುಲ್ಕವಾಗಿ ಪಡೆಯುತ್ತಿದ್ದ. ನಂತರ ಆತ ತನ್ನನ್ನು ನ್ಯಾಯಾಲಯದಿಂದ ಅಧಿಕೃತವಾಗಿ ನೇಮಕಗೊಂಡಿರುವ ರಾಜೀ ಸಂಧಾನಕಾರ ಎನ್ನುವಂತೆ ಬಿಂಬಿಸಿಕೊಳ್ಳುತ್ತಿದ್ದ.
ಕಕ್ಷಿದಾರರಿಗೆ ಗಾಂಧಿನಗರದಲ್ಲಿನ ತನ್ನ ಕಚೇರಿಗೆ ಕರೆಸಿಕೊಂಡು ನ್ಯಾಯಾಲಯದ ರೀತಿ ಇದ್ದ ಕಚೇರಿಯಲ್ಲಿ ತನ್ನನ್ನು ನ್ಯಾಯ ಮಂಡಳಿಯ ಮುಖ್ಯಸ್ಥ ಎಂದು ಬಿಂಬಿಸಿಕೊಂಡು ಕಕ್ಷಿದಾರರಿಗೆ ಅನುಕೂಲವಾಗುವಂತೆ ಆದೇಶ ಹೊರಡಿಸುತ್ತಿದ್ದ.
ಕಂದಾಯ ದಾಖಲೆಗಳಲ್ಲಿ ತಮ್ಮ ಹೆಸರು ಬರಬೇಕು ಎಂದು ಬಯಸಿದ್ದ ತನ್ನ ಕಕ್ಷಿದಾರನ ಪರವಾಗಿ ನಕಲಿ ನ್ಯಾಯಾಲಯದ ಮೂಲಕ ಆದೇಶವೊಂದನ್ನು ಈತ ನೀಡಿದ್ದು, ಕಕ್ಷಿದಾರರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ಸೇರಿಸುವಂತೆ ಕಲೆಕ್ಟರ್ ಗೆ ಆದೇಶದಲ್ಲಿ ಸೂಚಿಸಿದ್ದ. ಆದೇಶವನ್ನು ಅನುಷ್ಠಾನಕ್ಕೆ ತರಲು ಮೋರಿಸ್ ಮತ್ತೊಬ್ಬ ವಕೀಲರ ಮೂಲಕ ನಗರ ಸಿವಿಲ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಅದರೊಂದಿಗೆ ತನ್ನ ನ್ಯಾಯಾಲಯ ನೀಡಿದ ನಕಲಿ ಆದೇಶ ಪ್ರತಿಯನ್ನು ಕೂಡ ಲಗತಿಸಿದ್ದ. ಸಿವಿಲ್ ನ್ಯಾಯಾಲಯದ ರಿಜಿಸ್ಟ್ರಾರ್ ಹಾರ್ದಿಕ್ ದೇಸಾಯಿ ಈ ಬಗ್ಗೆ ಪರಿಶೀಲನೆ ನಡೆಸಿ ನಕಲಿ ಕೋರ್ಟ್ ನ್ಯಾಯಾಧೀಶನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.