ಮುಂಬೈ: ನಕಲಿ ವೆಬ್‌ಸೈಟ್ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿಕೆಟ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಅನ್ನು ಮುಂಬೈ ಕ್ರೈಂ ಬ್ರಾಂಚ್‌ನ ದಕ್ಷಿಣ ವಲಯ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಈ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಗುಜರಾತ್‌ನಿಂದ 7 ಜನರನ್ನು ಬಂಧಿಸಲಾಗಿದೆ. ನಕಲಿ ವೆಬ್ ಪೇಜ್ ಲಿಂಕ್ ಮೂಲಕ ಈ ಜನರು ಟಿಕೆಟ್ ಮಾರಾಟ ಮಾಡಿರುವ ಬಗ್ಗೆ ಅಧಿಕಾರಿಗಳು ಸದ್ಯ ತನಿಖೆ ನಡೆಸುತ್ತಿದ್ದಾರೆ.
ಬಿಗ್ ಟ್ರೀ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಒಒ) ಅನಿಲ್ ಮಖಿಜಾ(66) ಅವರು ಅಪರಿಚಿತ ವ್ಯಕ್ತಿಯೊಬ್ಬರು ನಕಲಿ ವೆಬ್ ಪುಟ ಲಿಂಕ್ ಅನ್ನು ರಚಿಸುವ ಮೂಲಕ ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ಆರೋಪಿಗಳು ಬಿಗ್ ಟ್ರೀ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ನಂತೆ ನಿಖರವಾಗಿ ಪೋಸ್ ನೀಡಿ https://bookmyshow.cloud/sports/tata-ipl-2024 ಎಂಬ ನಕಲಿ ವೆಬ್ ಪುಟ ಲಿಂಕ್ ಅನ್ನು ರಚಿಸಿದ್ದಾರೆ ಎಂದು ಮಖಿಜಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನಕಲಿ ವೆಬ್‌ಸೈಟ್ ಆನ್‌ಲೈನ್ ವೆಬ್ ಪೋರ್ಟಲ್ ಆಗಿದ್ದು, ಇದರ ಮೂಲಕ ಐಪಿಎಲ್ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.
ಈ ನಕಲಿ ವೆಬ್‌ಪುಟದ ಮೂಲಕ ಟಿಕೆಟ್‌ಗಳನ್ನು ಮಾರಾಟ ಮಾಡುವುದರಿಂದ ಬಿಗ್ ಟ್ರೀ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ನಷ್ಟವಾಗಿದ್ದು, ಕಂಪನಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದೆ.
ದಕ್ಷಿಣ ವಲಯದ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ತಕ್ಷಣ, ಸೈಬರ್ ಪೊಲೀಸರು ಮತ್ತು ಅಪರಾಧ ಗುಪ್ತಚರ ಘಟಕ(ಸಿಐಯು) ಪ್ರಕರಣದ ತನಿಖೆ ಪ್ರಾರಂಭಿಸಿದೆ. ಗುಜರಾತ್‌ನ ಸೂರತ್‌ನಿಂದ ನಕಲಿ ವೆಬ್‌ಪುಟದ ಲಿಂಕ್ ಕಾರ್ಯನಿರ್ವಹಿಸುತ್ತಿದೆ ಎಂದು ಸಿಐಯು ಪತ್ತೆ ಮಾಡಿದೆ. ಸಿಐಯು ತಂಡ ಸೂರತ್‌ಗೆ ತೆರಳಿ ಆರೋಪಿ ಖುಶಾಲ್ ರಮೇಶ್‌ಭಾಯ್ ದೊಬಾರಿಯಾ(24)ನನ್ನು ಬಂಧಿಸಿದೆ.
ದೊಬಾರಿಯಾ ಬಂಧನದ ನಂತರ ಪೊಲೀಸರು ಇನ್ನೂ ಆರು ಆರೋಪಿಗಳನ್ನು ಬಂಧಿಸಿದ್ದಾರೆ. ಭಾರ್ಗವ್ ಕಿಶೋರಭಾಯ್ ಬೋರಾಡ್(22), ಉತ್ತಮ್ ಮನ್ಸುಖಭಾಯಿ ಭೀಮಾನಿ(21), ಜಾಸ್ಮಿನ್ ಗಿರ್ಧರ್ಭಾಯಿ ಪಿಥಾನಿ(22), ಹಿಮ್ಮತ್ ರಮೇಶಭಾಯ್ ಅಂತ್ಲಾ(35), ನಿಕುಂಜ್ ಭೂಪತಭಾಯ್ ಖಿಮಾನಿ(27) ಮತ್ತು ಅರವಿಂದಭಾಯ್ ಅಮೃತಲಾಲ್ ಚೋಟಾಲಿಯಾ(25) ಬಂಧಿತ ಆರೋಪಿಗಳು. ಈ ಗ್ಯಾಂಗ್‌ನ ಮುಖ್ಯಸ್ಥ ಖುಶಾಲ್ ರಮೇಶ್‌ಭಾಯ್ ದೊಬಾರಿಯಾ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಏಪ್ರಿಲ್ 3 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.