ಪುದುಚೆರಿ: ವ್ಯಕ್ತಿಯೊಬ್ಬ ತಾನು ಜಾರಿ ನಿರ್ದೇಶನಾಲಯ ಅಧಿಕಾರಿ ಎಂದು ಹೇಳಿಕೊಂಡು ಶಾಸಕರ ಮನೆಗೆ ನುಗ್ಗಿ ದಾಖಲೆಗಳನ್ನು ಪರಿಶೀಲಿಸಿಸುತ್ತಿದ್ದ ವೇಳೆ ಆತನನ್ನು ಬಂಧಿಸಿರುವ ಘಟನೆ ನಡೆದಿದೆ.
ಪುದುಚೆರಿಯ ಓಲ್ಗರೆಟ್ ವಿಧಾನಸಭಾ ಕ್ಷೇತ್ರದ ಶಾಸಕ ಶಿವಶಂಕರ್ ಎಂಬುವವರ ಮನೆಗೆ ಸ್ಕೂಟರ್ ನಲ್ಲಿ ಬಂದ ವ್ಯಕ್ತಿಯೊಬ್ಬ, ತಾನು ಇಡಿ ಅಧಿಕಾರಿ ಎಂದು ಹೇಳಿ ಚೆನ್ನೈ ಕಚೇರಿಯಿಂದ ಬಂದಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಾನೆ. ಶಾಸಕರ ಬಳಿ ಕೆಲ ವರ್ಷಗಳಿಂದ ಗಳಿಸಿದ ಆಸ್ತಿಯ ದಾಖಲೆ ಪತ್ರ ಹಾಗೂ ವಿವರಗಳನ್ನು ಕೇಳಿದ್ದಾನೆ.
ಆತ ಬಾಡಿಗೆ ಸ್ಕೂಟರ್ ನಲ್ಲಿ ಬಂದಿದ್ದಲ್ಲದೇ ಆತನ ಬಳಿ ಯಾವುದೇ ಐಡಿ ಕಾರ್ಡ್ ಕೂಡ ಇರಲಿಲ್ಲ. ಅಲ್ಲದೇ ಅತನ ಮುಖಭಾವ ನೋಡಿದಾಗ ಅನುಮಾನ ವ್ಯಕ್ತವಾಗುವಂತಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಶಿವಶಂಕರ್, ತಕ್ಷಣ ರೆಡ್ಡಿಪಾಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಶಾಸಕರ ಮನೆಗೆ ಆಗಮಿಸಿದ ಪೊಲೀಸರು ನಕಲಿ ಇಡಿ ಅಧಿಕಾರಿಯನ್ನು ಬಂಧಿಸಿದ್ದಾರೆ. ಆರೋಪಿ ಇದೇ ರೀತಿ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿದಂತೆ 7 ಶಾಸಕರನ್ನು ಸಂಪರ್ಕಿಸಿದ್ದ. ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.