ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಅರ್ಧ ಕೆಜಿ ನಕಲಿ ಚಿನ್ನ ಅಡವಿಟ್ಟು ಚಿನ್ನಾಭರಣ ಮೌಲ್ಯಮಾಪಕ 23 ಲಕ್ಷ ರೂ.ಗೂ ಅಧಿಕ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಚಿನ್ನಾಭರಣ ಮೌಲ್ಯಮಾಪಕ ಮಂಜುನಾಥ್ ವಿರುದ್ಧ ನೆಲಮಂಗಲ ಪೊಲೀಸ್ ಠಾಣೆಗೆ ಬ್ಯಾಂಕಿನ ವ್ಯವಸ್ಥಾಪಕ ಆನಂದ್ ದೂರು ನೀಡಿದ್ದು, ಆರೋಪಿ ಪರಾರಿಯಾಗಿದ್ದಾನೆ.
ಚಿನ್ನಾಭರಣ ಮೌಲ್ಯಮಾಪಕ ಮಂಜುನಾಥ್ ನಕಲಿ ಚಿನ್ನ ಅಡವಿಟ್ಟು, ಗಿರೀಶ್ ಹೆಸರಲ್ಲಿ 5 ಲಕ್ಷ ರೂ., ಲೋಕೇಶ್ ಹೆಸರಲ್ಲಿ 4 ಲಕ್ಷ ರೂ., ಆದರ್ಶ, ಐಶ್ವರ್ಯಾ, ಹರೀಶ್ ಅವರ ಹೆಸರಲ್ಲಿ ತಲಾ ಮೂರು ಲಕ್ಷ ರೂ. ಸೇರಿ ವಿವಿಧ ಗ್ರಾಹಕರ ಖಾತೆಯಿಂದ ಸಾಲ ಪಡೆದುಕೊಂಡಿದ್ದ.
ನಕಲಿ ಚಿನ್ನ ಅಡವಿಟ್ಟಿರುವುದು ಪರಿಶೀಲನೆ ಸಂದರ್ಭದಲ್ಲಿ ಗೊತ್ತಾಗಿದ್ದು, ಬ್ಯಾಂಕಿನ ವ್ಯವಸ್ಥಾಪಕ ಆನಂದ್ ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯ ಮಾತಿಗೆ ಒಪ್ಪಿ ಖಾತೆಗೆ ಹಣ ಹಾಕಿಸಿಕೊಂಡವರಿಗೂ ವಿಚಾರಣೆಗೆ ಪೊಲೀಸರು ನೋಟಿಸ್ ನೀಡಿದ್ದಾರೆ.