ಶಿವಮೊಗ್ಗ: ನಕಲಿ ಚಿನ್ನ ಒತ್ತೆ ಇಟ್ಟು ಬ್ಯಾಂಕಿಗೆ ವಂಚಿಸಿದ ದಂಪತಿ ಸೇರಿ ನಾಲ್ವರ ವಿರುದ್ಧ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಶೇಷಾದ್ರಿಪುರಂನಲ್ಲಿ ಶಾಖೆ ಹೊಂದಿರುವ ಬ್ಯಾಂಕ್ ನಲ್ಲಿ ಶಾಂತಿನಗರ ಬಡಾವಣೆಯ ದಂಪತಿ ಚಿನ್ನಾಭರಣ ಒತ್ತೆ ಇಟ್ಟು ಸಾಲ ಪಡೆದುಕೊಂಡಿದ್ದಾರೆ. ಆದರೆ, ಇವರು ನಕಲಿ ಚಿನ್ನ ಅಡವಿಟ್ಟಿದ್ದರೂ ಬ್ಯಾಂಕಿನ ಚಿನ್ನ ಮೌಲ್ಯಮಾಪಕರು ಅಸಲಿ ಚಿನ್ನವೆಂದು ತಿಳಿಸಿದ್ದಾರೆ.
ದಂಪತಿ ಒತ್ತೆಯಿಟ್ಟ ಚಿನ್ನಾಭರಣ ಅಸಲಿ ಎಂದು ತಿಳಿದ ಬ್ಯಾಂಕಿನವರು 1.70ಲಕ್ಷ ರೂ.ಸಾಲ ನೀಡಿದ್ದಾರೆ. ಚಿನ್ನಾಭರಣವನ್ನು ಪುನರ್ ಪರಿಶೀಲಿಸಿದಾಗ ನಕಲಿ ಎನ್ನುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ನಕಲಿ ಚಿನ್ನ ಒತ್ತೆ ಇಟ್ಟು ಸಾಲ ಪಡೆದ ದಂಪತಿ ಮತ್ತು ಪರಿಶೀಲಿಸಿ ಅಸಲಿ ಚಿನ್ನವೆಂದು ಹೇಳಿದ್ದ ಇಬ್ಬರು ಚಿನ್ನಾಭರಣ ಮೌಲ್ಯಮಾಪಕರ ವಿರುದ್ಧ ಬ್ಯಾಂಕ್ ಸಿಬ್ಬಂದಿ ದೂರು ನೀಡಿದ್ದಾರೆ. ಕೋಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.