ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲೂಕಿನ ಮೇಗಲಹಟ್ಟಿ ಸಮೀಪ ಖಾಲಿ ಜಾಗದಲ್ಲಿ ಚಿನ್ನದ ನಾಣ್ಯಗಳು ಸಿಗುತ್ತಿವೆ ಎನ್ನುವ ವದಂತಿ ಹರಡಿ ಅಕ್ಕಪಕ್ಕದ ಗ್ರಾಮಸ್ಥರು ಭಾನುವಾರ ಮುಗಿಬಿದ್ದು ಚಿನ್ನದ ನಾಣ್ಯಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 150-ಎ ಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಬೆಳಗ್ಗೆ ಕೆಲವರಿಗೆ ಚಿನ್ನದ ನಾಣ್ಯ ದೊರೆತಿವೆ ಎನ್ನುವ ಸುದ್ದಿ ಹರಡಿದೆ. ಇದನ್ನು ತಿಳಿದರು ಮಹಿಳೆಯರು ಸೇರಿದಂತೆ ನೂರಾರು ಮಂದಿ ಹುಡುಕಾಟ ನಡೆಸಿದ್ದಾರೆ. ಕೆಲವರಿಗೆ ವಿಕ್ಟೋರಿಯಾ ರಾಣಿಯ ಚಿತ್ರವಿರುವ ನಾಣ್ಯಗಳು ದೊರೆತಿವೆ. ನಕಲಿ ಬಂಗಾರದ ನಾಣ್ಯಗಳನ್ನೇ ಅಸಲಿ ಎಂದು ನಂಬಿದ ನೂರಾರು ಜನ ಹುಡುಕಾಟ ನಡೆಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮನವರಿಕೆ ಮಾಡಿಕೊಟ್ಟು ಜನರನ್ನು ಅಲ್ಲಿಂದ ಕಳುಹಿಸಿದ್ದಾರೆ.
ಇತ್ತೀಚೆಗೆ ಬೈರಾಪುರದಲ್ಲಿ ಕುರಿ ಕಾಯುತ್ತಿದ್ದವರಿಗೆ ಶಿವಾಜಿ ಚಿತ್ರವಿರುವ ನಾಣ್ಯಗಳು ಸಿಕ್ಕಿದ್ದು, ಅವು ನಕಲಿ ಎಂದು ಪೊಲೀಸರು ತಿಳಿಸಿದ್ದಾರೆ. ತಾಲೂಕಿನಲ್ಲಿ ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸುವ ಜಾಲ ಸಕ್ರಿಯವಾಗಿದ್ದು, ಅಂತಹ ತಂಡದವರೇ ಈ ನಕಲಿ ಚಿನ್ನದ ನಾಣ್ಯಗಳನ್ನು ಎಸೆದು ಹೋಗಿರಬಹುದು ಎಂದು ಹೇಳಲಾಗಿದೆ.