
ರಾಯಚೂರು: ಬೇನಾಮಿ ಹೆಸರಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ನಕಲಿ ಚಿನ್ನ ಒತ್ತೆ ಇಟ್ಟು ಅದರ ಮೇಲೆ ಸಾಲ ಪಡೆದ ಬ್ಯಾಂಕ್ ಮ್ಯಾನೇಜರ್ 10.97 ಕೋಟಿ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಶಾಖೆಯ ವ್ಯವಸ್ಥಾಪಕ ಕೆ. ನರೇಂದ್ರ ರೆಡ್ಡಿ ವಂಚನೆ ಮಾಡಿದ ಆರೋಪಿ. ಕಳೆದ ಮೂರು ವರ್ಷಗಳಿಂದ ಬೇನಾಮಿ ಹೆಸರುಗಳಲ್ಲಿ 105 ಖಾತೆಗಳನ್ನು ತೆರೆದು ಆ ಖಾತೆಗಳ ಮೂಲಕ ನಕಲಿ ಚಿನ್ನವನ್ನು ಅಡವಿಟ್ಟು, ಸುಮಾರು 10.97 ಕೋಟಿ ಸಾಲವನ್ನು ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಿದ್ದು, ಇದೀಗ ಬ್ಯಾಂಕ್ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ನಕಲಿ ಚಿನ್ನ ಸಾಲ ಖಾತೆಗಳಿಂದ 8 ಸಂಬಂಧಿಕರ ಖಾತೆಗೆ ಆರೋಪಿ ಹಣ ವರ್ಗಾಯಿಸಿದ್ದಾರೆ. ಹಿಂದಿನ ಬ್ಯಾಂಕ್ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದಾರೆ. ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ ವ್ಯವಸ್ಥಾಪಕ ನರೇಂದ್ರ ರೆಡ್ಡಿ ಪರಾರಿಯಾಗಿದ್ದಾರೆ. ಬ್ಯಾಂಕ್ ಆಫ್ ಮಹಾರಾಷ್ಟ್ರ ಪ್ರಾದೇಶಿಕ ವ್ಯವಸ್ಥಾಪಕ ಸುಚೇತ್ ರಾಯಚೂರು ಸೈಬರ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.