ರಾಯಚೂರು: ರಾಜ್ಯದಲ್ಲಿ ಒಂದೆಡೆ ಫೈನಾನ್ಸ್ ನವರ ಕಿರುಕುಳ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಮೈ ಕ್ರೋ ಫೈನಾನ್ಸ್ ನವರ ಕಾಟಕ್ಕೆ ಜನರು ಆತ್ಮಹತ್ಯೆಯಂತಹ ದಾರಿ ತುಳಿಯುತ್ತಿದ್ದಾರೆ. ಈ ನಡುವೆ ಇದನ್ನು ಬಂಡವಾಳ ಮಾಡಿಕೊಳ್ಳುತ್ತಿರುವ ಕೆಲ ಖತರ್ನಾಕ್ ಗ್ಯಾಂಗ್ ಗಳು ಜನರಿಂದ ಸುಲಿಗೆ, ವಸೂಲಿಗೆ ಇಳಿದಿವೆ.
ಫೈನಾನ್ಸ್ ಸಾಲ ರಿಕವರಿ ಟೀಂ ಹೆಸರಿನಲ್ಲಿ ಜನರಿಗೆ ಇನ್ನಷ್ಟು ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಅತಿಥಿಯಾಗಿದೆ. ರಾಯಚೂರು ಗ್ರಾಮೀಣ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಗುಂಪು ಮೊಬೈಲ್ ಆಪ್ ಮೂಲಕ ಫೈನಾನ್ಸ್ ಬಾಕಿ ಇರುವವರನ್ನು ಗುರುತಿಸಿ, ಅವರನ್ನೇ ಟಾರ್ಗೆಟ್ ಮಾಡುತ್ತಿತ್ತು. ರಸ್ತೆ ಮಧ್ಯೆ ಬೈಕ್, ವಾಹನಗಳನ್ನು ತಡೆದು ಸಾಲ ತೀರಿಸುವಂತೆ ಬೆದರಿಕೆ ಹಾಕಿ ವಸೂಲಿ ಮಾಡುತ್ತಿದ್ದರು. ಯಾದಗಿರಿ ಮೂಲದ ಸೈಯದ್ ಬಾಷಾ ಎಂಬುವವರ ಬುಲೆರೋ ವಾಹನವನ್ನು ರಾಯಚೂರು ಹೊರವಲಯದ ಬೈಪಾಸ್ ರಸ್ತೆಯಲ್ಲಿ ತಡೆದು ವಾಹನವನ್ನು ಜಪ್ತಿ ಮಾಡಿದ್ದರು. ಫೈನಾನ್ಸ್ ಕಂಪನಿಗೆ ಕಂತು ಕಟ್ಟಿ ಬಂದಿದ್ದರೂ ವಾಹನ ಬಿಟ್ಟಿರಲಿಲ್ಲ. ಫೈನಾನ್ಸ್ ನಲ್ಲಿ ಹಣ ಕಟ್ಟಿದರೆ ಸಾಲಲ್ಲ. ನಮಗೆ ಹಣ ಕೊಡಬೇಕು ಎಂದು ಆವಾಜ್ ಹಾಕಿದ್ದರು.
ಇದರಿಂದ ಅನುಮಾನಗೊಂದ ಸೈಯದ್ ಬಾಷಾ ಸಹೋದರ ಅಜೀಜ್ ರಾಯಚೂರು ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಫಯಾಜ್, ಶೇಖ್ ಎಂಡಿ ಆಯುಬ್, ಸೈಯದ್ ಶಹಬಾಜ್ ಅಹ್ಮದ್, ಅರೋನ್ ರಸೀದ್ ಎಂದು ಗುರುತಿಸಲಾಗಿದೆ.