ಬೆಂಗಳೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ನಕಲಿ ದಾಖಲೆ ನೀಡಿ ಕಾರ್ಮಿಕ ಕಾರ್ಡ್ ಪಡೆದವರನ್ನು ಪತ್ತೆ ಮಾಡಲು ಅಂಬೇಡ್ಕರ್ ಸೇವಾ ಕೇಂದ್ರ ಆರಂಭಿಸಲು ಕಾರ್ಮಿಕ ಇಲಾಖೆ ಮುಂದಾಗಿದೆ.
ಸುಮಾರು 58 ಲಕ್ಷ ಮಂದಿ ಕಾರ್ಮಿಕ ಮಂಡಳಿಯಲ್ಲಿ ನೋಂದಣಿ ಮಾಡಿಸಿ ಕಾರ್ಮಿಕ ಕಾರ್ಡ್ ಪಡೆದಿದ್ದಾರೆ. ಇದರಲ್ಲಿ ನಕಲಿ ಕಾರ್ಮಿಕರ 20 ಲಕ್ಷ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ಇನ್ನುಳಿದ ಕಾರ್ಡ್ ಗಳ ನೈಜತೆ ಪರಿಶೀಲಿಸಲು ಪ್ರತ್ಯೇಕವಾಗಿ ಅಂಬೇಡ್ಕರ್ ಸೇವಾ ಕೇಂದ್ರ ಆರಂಭಿಸಲು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ.
ನಿರ್ಮಾಣ ಕಾಮಗಾರಿ ಕೈಗೊಳ್ಳುವವರು ಕಾರ್ಮಿಕ ಸೆಸ್ ಪಾವತಿಸದಿರುವುದನ್ನು ತಪ್ಪಿಸಲು ಜಿಪಿಎಸ್ ಮೂಲಕ ಆಸ್ತಿಗಳ ಪಟ್ಟಿ ಮಾಡುವ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.