ಬೆಂಗಳೂರು: ನಕಲಿ ದಾಖಲಾತಿ ಸಲ್ಲಿಸಿ ಸರ್ಕಾರಿ ಉದ್ಯೋಗ ಪಡೆಯಲು ಯತ್ನಿಸಿದ ಪ್ರಕರಣದಲ್ಲಿ ಮೂವರು ಸರ್ಕಾರಿ ನೌಕರರು ಸೇರಿದಂತೆ 48 ಮಂದಿಯನ್ನು ಸಿಸಿಬಿ ವಿಶೇಷ ವಿಚಾರಣಾ ದಳ ಅಧಿಕಾರಿಗಳು ಬಂಧಿಸಿದ್ದಾರೆ.
37 ಅಭ್ಯರ್ಥಿಗಳು, 11 ಮಂದಿ ಮಧ್ಯವರ್ತಿಗಳು ಬಂಧಿತರಾಗಿದ್ದು, ಇವರಲ್ಲಿ ಮೂವರು ಸರ್ಕಾರಿ ನೌಕರರಾಗಿದ್ದಾರೆ. ಕಲಬುರ್ಗಿ ಜಿಲ್ಲೆ ಮುರಾರ್ಜಿ ದೇಸಾಯಿ ಶಾಲೆ ಪ್ರಾಂಶುಪಾಲ ಆನಂದ್, ಜೋಗ ಫಾಲ್ಸ್ ಕೆಪಿಟಿಸಿಎಲ್ ಕಚೇರಿ ಪ್ರಥಮ ದರ್ಜೆ ಸಹಾಯಕ ಕೃಷ್ಣ, ಹಾಸನ ಜಲಸಂಪನ್ಮೂಲ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಪ್ರದೀಪ್ ಬಂಧಿತರು.
ಬಂಧಿತರಿಂದ 17 ಮೊಬೈಲ್, 40 ಲಕ್ಷ ರೂಪಾಯಿ ಮೌಲ್ಯದ ಎರಡು ಕಾರು, ಒಂದು ಕಂಪ್ಯೂಟರ್ ಹಾರ್ಡ್ ಡಿಸ್ಕ್ ವಶಕ್ಕೆ ಪಡೆಯಲಾಗಿದೆ. 2022ರ ಅಕ್ಟೋಬರ್ ನಲ್ಲಿ ಜಲ ಸಂಪನ್ಮೂಲ ಇಲಾಖೆ ದ್ವಿತೀಯ ದರ್ಜೆ ಸಹಾಯಕರ ಬ್ಯಾಕ್ಲಾಗ್ 182 ಹುದ್ದೆಗಳಿಗೆ ನೇರ ನೇಮಕಾತಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. 62 ಮಂದಿ ಅಭ್ಯರ್ಥಿಗಳು ಸಲ್ಲಿಸಿದ್ದ ಅಂಕ ಪಟ್ಟಿ ಹಾಗೂ ಇತರೆ ದಾಖಲಾತಿಗಳು ಪರಿಶೀಲಿಸಿದಾಗ ನಕಲಿ ಎನ್ನುವುದು ಕಂಡುಬಂದಿದೆ. ಆಗ ಶೇಷಾದ್ರಿಪುರಂ ಠಾಣೆಗೆ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದಾರೆ.
ಪ್ರಕರಣ ಸಿಸಿಬಿಗೆ ಹಸ್ತಾಂತರವಾಗಿದ್ದು, ಸಿಸಿಬಿ ಇನ್ಸ್ಪೆಕ್ಟರ್ ಶ್ರೀನಿವಾಸ್ ನೇತೃತ್ವದ ತಂಡ ಕಲಬುರ್ಗಿಯಲ್ಲಿ 25, ಹಾಸನದಲ್ಲಿ 12, ಬೆಳಗಾವಿಯಲ್ಲಿ 3, ಕೋಲಾರ, ಕೊಪ್ಪಳ, ವಿಜಯನಗರ, ರಾಯಚೂರು ಸೇರಿದಂತೆ 12 ಜಿಲ್ಲೆಗಳಿಂದ ನಕಲಿ ದಾಖಲೆ ಸೃಷ್ಟಿಸಿ ಅರ್ಜಿ ಸಲ್ಲಿಸಿದ 62 ಮಂದಿಯ ಪೈಕಿ 37 ಅಭ್ಯರ್ಥಿಗಳನ್ನು ಬಂಧಿಸಿದ್ದಾರೆ. ಮಧ್ಯವರ್ತಿಗಳಾಗಿದ್ದ 11 ಮಂದಿಯನ್ನು ಕೂಡ ಬಂಧಿಸಲಾಗಿದೆ. 25 ಅಭ್ಯರ್ಥಿಗಳು ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.