ಬೆಂಗಳೂರು: ದಾಖಲೆ ಇಲ್ಲದೆ 2500 ರೂ. ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ನಿವೃತ್ತ ಸರ್ಕಾರಿ ವೈದ್ಯ ಸೇರಿದಂತೆ ಆರು ಜನರನ್ನು ಬೊಮ್ಮನಹಳ್ಳಿ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಬೆಂಗಳೂರು ಜೆಪಿ ನಗರ ಏಳನೇ ಹಂತದ ಡಾ. ಸುನಿಲ್, ಹೊಂಗಸಂದ್ರದ ಪ್ರವೀಣ್, ವಿಜಯನಗರದ ನಾಗರಾಜ, ಹಾಗೂ ಗಾರ್ವೆಭಾವಿ ಪಾಳ್ಯದ ರಮೇಶ, ರವಿ, ಗುರುಮೂರ್ತಿ ಲೇಔಟ್ ನ ರೂಪಮ್ ಚಾತಿ ಬಂಧಿತ ಆರೋಪಿಗಳು. ಇವರಿಂದ ನಕಲಿ ದಾಖಲೆಗಳು, ಹಾಗೂ 50 ಕ್ಕೂ ಹೆಚ್ಚು ಆಧಾರ್ ಕಾರ್ಡ್, ಕಂಪ್ಯೂಟರ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಆಗ್ನೇಯ ವಿಭಾಗದ ಪೊಲೀಸರಿಗೆ ರಾಜ್ಯ ಆಂತರಿಕ ಭದ್ರತಾ ಪಡೆ ನಕಲಿ ಆಧಾರ್ ಕಾರ್ಡ್ ಜಾಲದ ಬಗ್ಗೆ ಮಾಹಿತಿ ನೀಡಿದ್ದು, ತನಿಖೆ ಕೈಗೊಂಡ ಮೈಕೋ ಲೇಔಟ್ ಉಪ ವಿಭಾಗದ ಎಸಿಪಿ ಪ್ರತಾಪ ರೆಡ್ಡಿ ನೇತೃತ್ವದ ತಂಡ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಅಕ್ರಮ ಬಾಂಗ್ಲಾ ವಲಸಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಧಾರ್ ಕಾರ್ಡ್ ಗಳನ್ನು ನೀಡಿರುವ ಶಂಕೆಯಿದ್ದು, ತನಿಖೆ ಕೈಗೊಳ್ಳಲಾಗಿದೆ. ಬೊಮ್ಮನಹಳ್ಳಿಯಲ್ಲಿ ಕಂಪ್ಯೂಟರ್ ಸೆಂಟರ್ ಹೊಂದಿದ್ದ ಪ್ರವೀಣ್ ದಂಧೆಯ ಕಿಂಗ್ ಪಿನ್ ಆಗಿದ್ದ. ಯಾವುದೇ ದಾಖಲೆ ಇಲ್ಲದ ಜನರಿಗೆ ಆರೋಪಿಗಳು ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದು, ಒಬ್ಬರಿಂದ 2ರಿಂದ 2,500 ರೂ. ಪಡೆಯುತ್ತಿದ್ದರು. ಸುಮಾರು 500 ಜನರಿಗೆ ಆಧಾರ್ ಕಾರ್ಡ್ ಮಾಡಿಕೊಟ್ಟಿರುವ ಶಂಕೆ ಇದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.