
ಬೆಂಗಳೂರು: ನಕಲಿ ಡಿಡಿ ನೀಡಿ ಉದ್ಯಮಿಗಳು, ಲೇವಾದೇವಿ ವ್ಯವಹಾರಸ್ಥರನ್ನು ವಂಚಿಸುತ್ತಿದ್ದ ದಂಪತಿ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಇಂದ್ರಜಿತ್ ನಾಯಕ್, ಮಂಜುಳಾ ದಂಪತಿ ಹಾಗೂ ಮುನಿರಾಜ್ ಮತ್ತು ಆನಂದ್ ಬಂಧಿತರು ಎಂದು ಹೇಳಲಾಗಿದೆ. ಇವರು ನಕಲಿ ಡಿಡಿ ಸಿದ್ಧಪಡಿಸಿಕೊಂಡು ವ್ಯವಹಾರಸ್ಥರನ್ನು ಭೇಟಿಯಾಗಿ ತಮಗೆ ತುರ್ತಾಗಿ ಹಣ ಬೇಕಿದೆ, ಕಮಿಷನ್ ಇಟ್ಟುಕೊಂಡು ಹಣ ಕೊಡಿ ಎಂದು ಪಡೆಯುತ್ತಿದ್ದರು.
ಕಮಿಷನ್ ಆಸೆಗೆ ಕೆಲವು ವ್ಯವಹಾರಸ್ಥರು ಡಿಡಿ ಪಡೆದು ಹಣ ಕೊಡುತ್ತಿದ್ದರು. ಬೇಗೂರಿನ ಜಯರಾಮ್ ಎಂಬವರು ನಕಲಿ ಡಿಡಿ ಪಡೆದು 1.5 ಲಕ್ಷ ರೂಪಾಯಿ ಹಣ ಕೊಟ್ಟಿದ್ದಾರೆ. ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಅದು ನಕಲಿ ಡಿಡಿ ಎನ್ನುವುದು ಗೊತ್ತಾಗಿ ಅವರು ಬೇಗೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ನಾಲ್ವರನ್ನು ಬಂಧಿಸಿದ್ದು 7.18 ಕೋಟಿ ರೂಪಾಯಿ ಮೌಲ್ಯದ ನಕಲಿ ಡಿಡಿ, ಕಂಪ್ಯೂಟರ್, ಸೀಲ್ ಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.