ವಂಚನೆಗೊಳಗಾಗುವವರು ಇರುವ ತನಕ ವಂಚನೆ ನಡೆಯುತ್ತಲೇ ಇರುತ್ತದೆ ಎಂಬ ಮಾತಿದೆ. ಇದಕ್ಕೆ ಪುಷ್ಟಿ ನೀಡುವಂತೆ ವಂಚಕರೂ ಸಹ ತರಹೇವಾರಿ ರೀತಿಯಲ್ಲಿ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ. ಆದರೆ ಜಪಾನ್ ನಲ್ಲಿ ನಡೆದಿರುವ ಪ್ರಕರಣವೊಂದು ವಂಚನೆ ಈ ಮಟ್ಟದಲ್ಲೂ ನಡೆಯಬಹುದಾ ಎಂಬ ಅಚ್ಚರಿಗೆ ಕಾರಣವಾಗಿದೆ.
ಹೌದು, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ 65 ವರ್ಷದ ಜಪಾನ್ ಮಹಿಳೆಯೊಂದಿಗೆ ತನ್ನನ್ನು ತಾನು ಗಗನಯಾನಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿ ರಷ್ಯಾ ಮೂಲದವನು ಎಂದು ಹೇಳಿಕೊಂಡಿದ್ದ. ನಿನ್ನನ್ನು ಅಪಾರವಾಗಿ ಪ್ರೀತಿಸುತ್ತೇನೆ. ಪ್ರಸ್ತುತ ನಾನು ಬಾಹ್ಯಾಕಾಶ ನೌಕೆಯಲ್ಲಿದ್ದು, ಭೂಮಿಗೆ ಬಂದಾಗ ಮದುವೆಯಾಗುತ್ತೇನೆ ಎಂದು ಭರವಸೆ ನೀಡಿದ್ದ.
ಬಳಿಕ ನಾನು ವಾಪಸ್ ಭೂಮಿಗೆ ಮರಳಲು ಶುಲ್ಕ ಕಟ್ಟಬೇಕಿದೆ. ಅಲ್ಲದೆ ರಾಕೆಟ್ ವೆಚ್ಚವನ್ನು ಸಹ ಭರಿಸಬೇಕಿದೆ ಎಂದು ಹೇಳಿ ಆಗಸ್ಟ್ 19 ರಿಂದ ಸೆಪ್ಟೆಂಬರ್ 5ರ ಅವಧಿಯವರೆಗೆ ಬರೋಬ್ಬರಿ ಮೂವತ್ತು ಸಾವಿರ ಡಾಲರ್ ಅಂದರೆ ಸರಿ ಸುಮಾರು 24 ಲಕ್ಷ ರೂಪಾಯಿ ಹಂತ ಹಂತವಾಗಿ ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದ.
ಇಷ್ಟಾದರೂ ಅವನ ಹಣ ವಸೂಲಿ ಕಾರ್ಯ ಮುಂದುವರೆದಿದ್ದು, ಕಡೆಗೆ ಅನುಮಾನಗೊಂಡ ಮಹಿಳೆ ಪೊಲೀಸರ ಮೊರೆ ಹೋದಾಗಲೇ ವಂಚನೆ ಬೆಳಕಿಗೆ ಬಂದಿದೆ. ಈ ವಂಚನೆ ಪ್ರಕರಣದ ಮಾಹಿತಿ ತಿಳಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.