
ಬೆಂಗಳೂರು: ನಕಲಿ ಆಧಾರ್ ಕಾರ್ಡ್ ಮಾಡಿಕೊಡುವ ದಂಧೆ ರಾಜ್ಯದಲ್ಲಿ ನಡೆಯುತ್ತಿದ್ದು, ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.
ನಕಲಿ ಆಧಾರ್ ಕಾರ್ಡ್ ನಿಂದ ನಕಲಿ ಮತದಾರರ ಗುರುತಿನ ಚೀಟಿ ಹಾಗೂ ಇನ್ನಿತರ ರಾಷ್ಟ್ರೀಯ ಭದ್ರತೆಗೆ ಅಪಾಯ ತಂದೊಡ್ಡುವ ಕೃತ್ಯಗಳು ಎಸಗಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಇಂತಹ ದಂಧೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಧಾರ್ ಪ್ರಾಧಿಕಾರಕ್ಕೆ ಬಿಜೆಪಿ ದೂರು ನೀಡಿ ಆಗ್ರಹಿಸಿದೆ.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ನೇತೃತ್ವದ ಬಿಜೆಪಿ ನಿಯೋಗ ಆಧಾರ್ ಪ್ರಾಧಿಕಾರಕ್ಕೆ ಲಿಖಿತ ದೂರು ನೀಡಿದೆ. ಸುಳ್ಳು ದಾಖಲೆ, ವಿಳಾಸ ಪುರಾವೆಗಳನ್ನು ನಿರ್ಮಿಸುವುದು ಮತ್ತು ನಕಲಿ ಆಧಾರ್ ಕಾರ್ಡ್ ಗಳನ್ನು ಸೃಷ್ಟಿಸುವುದು ಹಾಗೂ ನಕಲಿ ಯುಐಎಡಿಐ ಸಂಖ್ಯೆಯನ್ನು ಸೃಷ್ಟಿಸುವುದು ಹಾಗೂ ಅಕ್ರಮ ವಲಸಿಗರು, ನುಸುಳುಕೋರರಿಗೆ ವಿತರಿಸುವ ಸಂಘಟಿತ ಅಪರಾಧ ದಂಧೆಯಲ್ಲಿ ಕೆಲವರು ಭಾಗಿಯಾಗಿರುವುದು ಗಮನಕ್ಕೆ ಬಂದಿದೆ ಎಂದು ಹೇಳಿದೆ.