ಹಾಸನ: ಹಾಸನ ಜಿಲ್ಲೆಯ ಅರಕಲಗೂಡು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿಕೊಂಡು ಮೂಲ ರೈತನ ಗಮನಕ್ಕೆ ಬಾರದೆ ಜಮೀನನ್ನು ಬೇರೊಬ್ಬರಿಗೆ ಕ್ರಯ, ನೋಂದಣಿ ಮಾಡಿದ ಘಟನೆ ನಡೆದಿದೆ.
ಅರಕಲಗೂಡು ತಾಲೂಕು ರಾಮನಾಥಪುರ ಹೋಬಳಿ ಜಿಟ್ಟೇನಹಳ್ಳಿ ಗ್ರಾಮದ ಸರ್ವೆ ನಂಬರ್ 32/6, 32/35ರಲ್ಲಿ ತಲಾ 8.8 ಗುಂಟೆ ಭೂಮಿ ಶ್ರೀನಿವಾಸ ಬಿನ್ ಜವರೇಗೌಡ, ರೇವಣ್ಣ ಬಿನ್ ಜವರೇಗೌಡ ಸಹೋದರರಿಗೆ ಪಿತ್ರಾರ್ಜಿತ ಆಸ್ತಿಯಾಗಿ ಬಂದಿದೆ. ಈ ಜಮೀನನ್ನು ಅವರಿಗೆ ತಿಳಿಯದಂತೆ ಕೊಣನೂರು ಹೋಬಳಿ ಗೊಬ್ಬಳಿ ಗ್ರಾಮದ ಗಿರೀಶ ಬಿನ್ ಬಸವರಾಜು ಎಂಬುವರು 2024ರ ಆಗಸ್ಟ್ 12 ಮತ್ತು ಆಗಸ್ಟ್ 16ರಂದು ಅರಕಲಗೋಡು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಕ್ರಮವಾಗಿ ಬೇರೊಬ್ಬರಿಗೆ ನೋಂದಣಿ ಮಾಡಿಸಿಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಸರ್ವೆ ನಂಬರ್ ಮತ್ತು ಮೂಲ ಮಾಲೀಕನ ಮರೆ ಮಾಚಿ ಆ ವ್ಯಕ್ತಿಗಳ ಆಧಾರ್ ಕಾರ್ಡ್ ಹೋಲುವ ರೀತಿಯಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಅನಾಮಧೇಯ ವ್ಯಕ್ತಿಗಳನ್ನು ಕರೆತಂದು ನೋಂದಣಿ ಮಾಡಲಾಗಿದೆ. ಈ ವಿಷಯ ತಿಳಿದ ಜಮೀನು ಮಾಲೀಕ ಶ್ರೀನಿವಾಸ ಆಗಸ್ಟ್ 26ರಂದು ಸಬ್ ರಿಜಿಸ್ಟ್ರಾರ್ ಕಚೇರಿಗೆ ದೂರು ಸಲ್ಲಿಸಿ ನಕಲಿ ದಾಖಲೆ ಸೃಷ್ಟಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕ್ರಯ ಪತ್ರ ನೋಂದಣಿ ಆಗಿರುವುದನ್ನು ರದ್ದುಪಡಿಸಬೇಕೆಂದು ದೂರು ಕೊಟ್ಟಿದ್ದಾರೆ. ಈ ಪ್ರಕರಣ ತಿರುವು ಪಡೆಯುವುದನ್ನು ತಿಳಿದ ಗಿರೀಶ ಆಗಸ್ಟ್ 27ರಂದು ಕ್ರಯ ಪತ್ರ ರದ್ದತಿಗೆ ಅರ್ಜಿ ಸಲ್ಲಿಸಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂದ ಹೇಳಲಾಗಿದೆ.