ಬೆಂಗಳೂರು: ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ಗುರುತಿನ ಚೀಟಿ ತಯಾರಿಕೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ಹೊರವಲಯದ ಸೂರ್ಯ ಸಿಟಿಯಲ್ಲಿ ದಂಧೆ ನಡೆಯುತ್ತಿದ್ದು, ಸೈಬರ್ ಸೆಂಟರ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಆರೋಪಿ ಅರ್ನಾಬ್ ಮಂಡಲ್ ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. 8000 ರೂ. ನೀಡಿದರೆ ಆಧಾರ್ ಕಾರ್ಡ್ ಗಳನ್ನು ಈತ ಮಾಡಿಕೊಡುತ್ತಿದ್ದ. ಅಲ್ಲದೆ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಆಧಾರ್ ಕಾರ್ಡ್ ಗಳನ್ನು ಕೊಡುತ್ತಿದ್ದ. ಆರೋಪಿ ಬಾಂಗ್ಲಾ ಪ್ರಜೆಗಳಿಗೆ ಮಾತ್ರ ಗುರುತಿನ ಚೀಟಿ ಮಾಡಿಕೊಡುತ್ತಿದ್ದ ಬಗ್ಗೆ ಮಾಹಿತಿ ಗೊತ್ತಾಗಿದೆ.
ಸ್ಥಳೀಯ ದಾಖಲೆಗಳನ್ನು ಪಡೆದು ಆನಂತರ ಆಧಾರ್ ಕಾರ್ಡ್ ಕೊಡುತ್ತಿದ್ದ. ಹಲವು ಬಾಂಗ್ಲಾ ವಲಸಿಗರಿಗೆ ಆಧಾರ್ ಕಾರ್ಡ್ ಗಳನ್ನು ಆರೋಪಿ ಮಾಡಿಸಿಕೊಟ್ಟಿದ್ದಾನೆ. ದಾಳಿಯ ವೇಳೆ ಆಧಾರ್ ಕಾರ್ಡ್ ಗಳು, 18 ಮನೆಗಳ ಬಾಡಿಗೆ ಅಗ್ರಿಮೆಂಟ್ ಪತ್ತೆಯಾಗಿದೆ. ಖಚಿತ ಮಾಹಿತಿ ಮೇರೆಗೆ ಸೈಬರ್ ಸೆಂಟರ್ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬಾ ಅವರು, ಅಕ್ರಮ ಬಾಂಗ್ಲಾ ವಲಸಿಗರಿಗೆ ನಕಲಿ ಐಡಿ ಕಾರ್ಡ್ ತಯಾರಿಕೆ ದಂಧೆ ಬಯಲಾಗಿದೆ. ಸೂರ್ಯ ಸಿಟಿಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಸೈಬರ್ ಕೆಫೆ ಮಾಡಿಕೊಂಡಿದ್ದ. ಬಾಂಗ್ಲಾ ಪ್ರಜೆಗಳಿಗೆ ಭಾರತೀಯರು ಎಂದು ನಕಲಿ ದಾಖಲೆಗಳನ್ನು ತಯಾರಿಸಿ ಕೊಡುತ್ತಿದ್ದ. ಕಳೆದ ಒಂದು ವರ್ಷದಿಂದ ಇದೇ ರೀತಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೊಟ್ಟಿದ್ದಾನೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರ ದಾಳಿ ವೇಳೆ ನಕಲಿ ದಾಖಲಾತಿಗಳನ್ನು ಜಪ್ತಿ ಮಾಡಲಾಗಿದೆ. 18 ಮನೆಗೆ ಸಂಬಂಧಿಸಿದ ಲೀಸ್ ಅಗ್ರಿಮೆಂಟ್ ಗಳು, 55 ಆಧಾರ್ ಕಾರ್ಡ್ ಗಳು, 40 ಬ್ಯಾಂಕ್ ದಾಖಲಾತಿ, ಎರಡು ಕಂಪ್ಯೂಟರ್, ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ.
ಸೈಬರ್ ಕೆಫೆಯಲ್ಲಿ ಬಾಂಗ್ಲಾ ಪ್ರಜೆಗಳಿಗೆ ಇತರ ದಾಖಲಾತಿ ಮಾಡಿಕೊಡುತ್ತಿದ್ದ. ಒಂದು ಕಾರ್ಡ್ ಮಾಡಿಕೊಡಲು ಎಂಟರಿಂದ ಹತ್ತು ಸಾವಿರ ರೂಪಾಯಿ ಪಡೆದುಕೊಳ್ಳುತ್ತಿದ್ದ. ನಕಲಿ ಐಡಿ ಕಾರ್ಡ್ ಗಳ ದಂಧೆಯಲ್ಲಿ ಇನ್ನೂ ಹಲವರು ಶಾಮೀಲಾಗಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಎಸ್ಪಿ ಬಾಬಾ ಹೇಳಿದ್ದಾರೆ.