ನವಲಗುಂದ: ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಐದು ಎಕರೆ ಜಮೀನನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ನವಲಗುಂದದ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಉದಯ ಶ್ರೀಧರ ಎಂಬುವರ 5 ಎಕರೆ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.
ಧಾರವಾಡದ ರಾಜೀವ್ ಗಾಂಧಿನಗರದ ಪರುಶುರಾಮ ರಂಗರಾವ್ ನಾಡಕರ್ಣಿ, ಮೊರಬಾದ ದಸ್ತು ಬರಹಗಾರ ಎಂ.ಪಿ. ಅಜಗೊಂಡ ಅವರನ್ನು ಬಂಧಿಸಲಾಗಿದೆ. ಜಮೀನು ಮಾಲೀಕ ಉದಯ ಶ್ರೀಧರ ನಾರಾಯಣ ಮುಳಗುಂದ ಅವರ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ಗುಮ್ಮಗೊಳ ಗ್ರಾಮದ ಸರ್ವೆ ನಂಬರ್ 255/8ರಲ್ಲಿನ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ.
ಜಮೀನು ಮಾಲಿಕ ಉದಯ ಶ್ರೀಧರ್ ಜುಲೈನಲ್ಲಿ ನವಲಗುಂದ ಠಾಣೆಗೆ ದೂರು ನೀಡಿದ್ದರು. ಆರೋಪಿ ಪರಶುರಾಮ ಮತ್ತು ಎಂ.ಪಿ. ಅಜಗೊಂಡ ಮೂಲಕ ಖರೀದಿ ಪತ್ರ ತಯಾರಿಸಿ ನವಲಗುಂದ ಉಪ ನೋಂದಣಿ ಕಚೇರಿಯಲ್ಲಿ ಬಸವರಾಜ ನಿಂಗಪ್ಪ ದಿವಟಗಿ ಅವರಿಗೆ ಖರೀದಿ ಪತ್ರ ನೋಂದಣಿ ಮಾಡಿಸಿದ್ದರು. ಆ ಖರೀದಿ ಪತ್ರಕ್ಕೆ ಮೌಲಾಸಾಬ ಮತ್ತು ಮಾರುತಿ ಸಾಕ್ಷಿಯಾಗಿ ಸಹಿ ಹಾಕಿದ್ದರು.