ಕಾನ್ಸ್ಟೇಬಲ್ ಮೀಸಲಾತಿ ವಿಚಾರದಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಒಬಿಸಿಯ ಮಹಿಳಾ ಅಭ್ಯರ್ಥಿಯು, ಸಾಮಾನ್ಯ ವರ್ಗದ ಮಹಿಳಾ ಅಭ್ಯರ್ಥಿಗಿಂತ ಹೆಚ್ಚು ಅಂಕಗಳನ್ನು ಪಡೆದರೆ, ನೇಮಕಾತಿಗೆ ಅರ್ಹತೆ ಪಡೆಯುತ್ತಾರೆಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
2018ರ ಕಾನ್ಸ್ಟೇಬಲ್ ನೇಮಕಾತಿ ಪ್ರಕರಣ ಕೋರ್ಟ್ ನಲ್ಲಿದೆ. ಇದ್ರ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಮೀಸಲಾತಿ ಕೋಟಾದಲ್ಲಿ ನೇಮಕಾತಿ ಆಗದೆ ಹೋದಲ್ಲಿ ಬೇರೆ ಕೋಟಾದಲ್ಲಿ ಅವರಿಗೆ ನೇಮಕಾತಿಗೆ ಅವಕಾಶ ನೀಡಬಹುದು ಎಂದಿದೆ.
ಸೌರವ್ ಯಾದವ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನಂತೆ ಅರ್ಜಿದಾರರನ್ನು ಮೂರು ತಿಂಗಳೊಳಗೆ ನೇಮಿಸುವಂತೆ ಪೊಲೀಸ್ ನೇಮಕಾತಿ ಮಂಡಳಿ ಮತ್ತು ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ರುಚಿ ಯಾದವ್ ಮತ್ತು ಇತರ 15 ಮಂದಿ ಮತ್ತು ಪ್ರಿಯಾಂಕಾ ಯಾದವ್ ಮತ್ತು ಇತರರ ಅರ್ಜಿಗಳನ್ನು ವಕೀಲ ಸೀಮಂತ್ ಸಿಂಗ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಆಲಿಸಿದ ನಂತರ ನ್ಯಾಯಮೂರ್ತಿ ಅಶ್ವನಿ ಕುಮಾರ್ ಮಿಶ್ರಾ ಈ ಆದೇಶ ನೀಡಿದ್ದಾರೆ.
ಅರ್ಜಿದಾರರು, ಕಟ್ ಆಫ್ ಮೆರಿಟ್ ಗಿಂತ ಕಡಿಮೆ ಅಂಕ ಪಡೆದಿದ್ದಾರೆ. ಹಾಗಾಗಿ ಅವರನ್ನು ಆಯ್ಕೆ ಮಾಡಲು ಸಾಧ್ಯವಾಗಿರಲಿಲ್ಲ. ಆದ್ರೆ ಸಾಮಾನ್ಯ ವರ್ಗದಲ್ಲಿ ಮಹಿಳಾ ಅಭ್ಯರ್ಥಿ ಪಡೆದ ಅಂಕಗಳಿಗಿಂತ ಒಬಿಸಿ ಮಹಿಳಾ ಅಭ್ಯರ್ಥಿ ಹೆಚ್ಚು ಅಂಕ ಪಡೆದಿದ್ದಾರೆ. ಹಾಗಾಗಿ ಆ ವಿಭಾಗದಲ್ಲಿ ಅವರ ನೇಮಕಾತಿ ನಡೆಯಬೇಕೆಂದು ವಕೀಲರು ವಾದಿಸಿದ್ದರು.
ಅರ್ಜಿದಾರರು ಮೀಸಲಾತಿಯನ್ನು ಕೋರಿದ್ದರು. ಈ ಆಧಾರದ ಮೇಲೆ ಅವರಿಗೆ ನೇಮಕಾತಿ ನೀಡಲಾಗಿಲ್ಲ. ಅರ್ಜಿದಾರರು ಮೀಸಲಾತಿಯ ಎರಡು ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿತ್ತು. ಅವರು ಹಿಂದುಳಿದ ವರ್ಗಗಳ ಮಹಿಳಾ ಕೋಟಾದಲ್ಲಿ ಯಶಸ್ವಿಯಾಗದಿದ್ದರೆ, ಅವರು ಸಾಮಾನ್ಯ ವರ್ಗದ ಮಹಿಳಾ ಕೋಟಾ ಸಮಾನತೆಯನ್ನು ಕೋರುವಂತಿಲ್ಲ ಎಂದು ಸರ್ಕಾರ ವಾದಿಸಿತ್ತು. ನ್ಯಾಯಾಲಯ ಈ ವಾದವನ್ನು ಸ್ವೀಕರಿಸಲಿಲ್ಲ. ಸಾಮಾನ್ಯ ಕೋಟಾದ ಮಹಿಳಾ ಅಭ್ಯರ್ಥಿಗಳಿಗಿಂತ ಹೆಚ್ಚಿನ ಅಂಕಗಳ ಆಧಾರದ ಮೇಲೆ ಹಿಂದುಳಿದ ವರ್ಗಗಳ ಮಹಿಳಾ ಅಭ್ಯರ್ಥಿಗಳನ್ನು ನೇಮಿಸಲು ಆದೇಶಿಸಿದೆ.