ಯುವತಿಯೊಬ್ಬಳ ಬಾಯಿಗೆ ಟೇಪ್ ಹಾಕಿ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಇದನ್ನು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಸಲಾಗುತ್ತಿರುವ ದಾಳಿ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋ ಬಾಂಗ್ಲಾದೇಶದ್ದು ಎಂದು ಆರೋಪಿಸಲಾಗಿದ್ದು, ಮುಸ್ಲಿಮರು ಹಿಂದೂ ಯುವತಿಯನ್ನು ಅಪಹರಿಸಿ ಕೈಕಾಲು ಕಟ್ಟಿ ರಸ್ತೆಯಲ್ಲಿ ಕೂರಿಸಿದ್ದಾರೆ ಎಂದು ಹೇಳಲಾಗ್ತಿದೆ. ಆದರೆ ಈ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು ಎಂದು ಇಂಡಿಯಾ ಟಿವಿಯ ಸತ್ಯ ಪರಿಶೀಲನೆ (Fact Check) ಬಹಿರಂಗಪಡಿಸಿದೆ.
ಇಂಟರ್ನೆಟ್ ಬಳಕೆದಾರರೊಬ್ಬರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ವೈರಲ್ ವೀಡಿಯೊದಲ್ಲಿ ಹುಡುಗಿಯೊಬ್ಬಳ ಬಾಯಿಗೆ ಟೇಪ್ ಹಾಕಿ ಕೈಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದೆ. “ಬಾಂಗ್ಲಾದೇಶದಲ್ಲಿ ಜಿಹಾದಿಗಳ ಕಪಿಮುಷ್ಠಿಯಲ್ಲಿರುವ ಅಸಹಾಯಕ ಹಿಂದೂ ಹುಡುಗಿ, ಸಹಾಯ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಸ್ವಲ್ಪ ಸಮಯದ ನಂತರ ಘೋರ ತೋಳಗಳು ಅವಳನ್ನು ತಮ್ಮ ಕಾಮಕ್ಕೆ ಬಲಿಯಾಗಿ ಮಾಡಿದ ನಂತರ ಅವಳನ್ನು ಕೊಲ್ಲುತ್ತವೆ. ಹಿಂದೂಸ್ತಾನದ ದ್ವಿಮುಖ ಹಿಂದೂಗಳೇ ಎಚ್ಚೆತ್ತುಕೊಳ್ಳಲು ಇನ್ನೂ ಸಮಯವಿದೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದ್ದಂತೆ ಇಂಡಿಯಾ ಟಿವಿಯ ಸತ್ಯ ಪರಿಶೀಲನೆ ತಂಡ, ವಿಡಿಯೋ ಸತ್ಯಾಸತ್ಯತೆ ಪರಿಶೀಲನೆಗೆಂದು ಮೊದಲು ಗೂಗಲ್ ಓಪನ್ ಸರ್ಚ್ ಅನ್ನು ಬಳಸಿಕೊಂಡು ವಿವಿಧ ವೆಬ್‌ಸೈಟ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಹುಡುಕಲು ಆರಂಭಿಸಿತು. ಆದಾಗ್ಯೂ ನಾವು ಏನನ್ನೂ ಕಂಡುಹಿಡಿಯಲಾಗಲಿಲ್ಲ ಎಂದು ತಂಡ ಹೇಳಿದೆ.
ಬಳಿಕ ನಾವು ಕೀಫ್ರೇಮ್‌ಗಳನ್ನು ರಿವರ್ಸ್-ಸರ್ಚ್ ಮಾಡಲು ಆಯ್ಕೆ ಮಾಡಿಕೊಂಡಿವು. ಜುಲೈ 18, 2024 ರ ಫೇಸ್‌ಬುಕ್ ಪೋಸ್ಟ್ ಗಳಲ್ಲಿ ಅದೇ ವೀಡಿಯೊವನ್ನು ಕಂಡುಕೊಂಡಿದ್ದು ಬಂಗಾಳಿ ಭಾಷೆಯಲ್ಲಿ ಇದು ಢಾಕಾದ ಜಗನ್ನಾಥ್ ವಿಶ್ವವಿದ್ಯಾಲಯ ಎಂದು ಗುರುತಿಸಲಾಯ್ತು. ನಾವು ನಂತರ ಗೂಗಲ್ ನಕ್ಷೆಗಳನ್ನು ಪರಿಶೀಲಿಸಿದ್ದೇವೆ ಮತ್ತು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಪ್ರತಿಮೆ ಮತ್ತು ಬಸ್ಸು ವೀಡಿಯೊದಲ್ಲಿ ಗೋಚರಿಸುತ್ತದೆ. ಹೆಚ್ಚುವರಿಯಾಗಿ, ಜಗನ್ನಾಥ್ ವಿಶ್ವವಿದ್ಯಾಲಯಕ್ಕೆ ಸಂಪರ್ಕಗೊಂಡ ಫೇಸ್‌ಬುಕ್ ಪೋಸ್ಟ್ ವೀಡಿಯೊದಲ್ಲಿರುವ ಹುಡುಗಿ ತನ್ನ ಸಹಪಾಠಿ ಆವಂತಿಕಾ ಎಂಬ ವಿದ್ಯಾರ್ಥಿನಿಯ ಆತ್ಮಹತ್ಯೆಯನ್ನು ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿನಿ ಎಂದು ದೃಢಪಡಿಸಿದೆ.
ಆವಂತಿಕಾ ಸಾವಿನ ಮೂರು ದಿನಗಳ ನಂತರ ಜಗನ್ನಾಥ್ ವಿಶ್ವವಿದ್ಯಾಲಯದಲ್ಲಿ ಮೇಣದಬತ್ತಿಯ ಪ್ರತಿಭಟನೆ ನಡೆಸಲಾಯಿತು ಎಂದು ಮತ್ತೊಂದು ಸುದ್ದಿ ವರದಿ ಬಹಿರಂಗಪಡಿಸಿದೆ. ಈ ಪ್ರತಿಭಟನೆಯ ವೇಳೆ ತ್ರಿಷಾ ಎಂಬ ವಿದ್ಯಾರ್ಥಿನಿ ಬಾಯಿಗೆ ಟೇಪ್ ಹಾಕಿಕೊಂಡು ಕೈಕಾಲು ಕಟ್ಟಿಕೊಂಡು ಪ್ರತಿಭಟನೆ ನಡೆಸಿದ್ದಾಳೆ. ಮಾರ್ಚ್‌ನಲ್ಲಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಪ್ರತಿಭಟನೆಯ ವೀಡಿಯೊವನ್ನು ಪ್ರಸ್ತುತ ಹಿಂಸಾಚಾರದೊಂದಿಗೆ ತಪ್ಪಾಗಿ ಸಂಯೋಜಿಸಲಾಗಿದೆ ಎಂದು ತಂಡ ದೃಢಪಡಿಸಿದೆ.