ಬಿಜೆಪಿ ಸಂಸದೆ ಮತ್ತು ನಟಿ ಕಂಗನಾ ರಣಾವತ್, ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ನರೇಂದ್ರ ಮೋದಿಯವರ ಬೆಂಗಾವಲಾಗಿ ಮಹಿಳೆಯೊಬ್ಬರು ಇರುವುದು ಕಂಡು ಬರುತ್ತದೆ. ಬಹುತೇಕರು ಈ ಮಹಿಳೆ SPG ಕಮಾಂಡೋ ಆಗಿರಬಹುದು ಎಂದು ಊಹಿಸಿದ್ದಾರೆ. ಅಲ್ಲದೇ ಮಹಿಳಾ ಸಬಲೀಕರಣದ ದೊಡ್ಡ ಉದಾಹರಣೆ ಎಂದು ಉಲ್ಲೇಖಿಸಲಾಗಿದೆ. ಫೋಟೋದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹಿಂದೆ ಡಾರ್ಕ್ ಸೂಟ್‌ನಲ್ಲಿ ಮಹಿಳೆ ನಡೆಯುತ್ತಿರುವುದು ಕಂಡುಬಂದಿದೆ.
ಕಂಗನಾ ರಣಾವತ್ ಈ ಫೋಟೋಗೆ ಯಾವುದೇ ಶೀರ್ಷಿಕೆಯನ್ನು ಸೇರಿಸದಿದ್ದರೂ, ಅವರು ಹೆಚ್ಚು ತರಬೇತಿ ಪಡೆದ ವಿಶೇಷ ರಕ್ಷಣಾ ಗುಂಪಿನ (SPG) ಭಾಗವಾಗಿರಬಹುದು ಎಂದು ಹಲವರು ಊಹಿಸಿದ್ದರು, ಅಲ್ಲದೇ ಕೆಲವು ಮಹಿಳಾ ಎಸ್‌ಪಿಜಿ ಕಮಾಂಡೋಗಳು ಕೂಡ ‘ಕ್ಲೋಸ್ ಪ್ರೊಟೆಕ್ಷನ್ ಟೀಮ್’ನ ಭಾಗವಾಗಿದ್ದಾರೆ.
ಆದರೆ ಕಂಗನಾ ರಣಾವತ್ ಶೇರ್ ಮಾಡಿರುವ ಫೋಟೋ ಕುರಿತಂತೆ ಈಗ ಸತ್ಯ ಸಂಗತಿ ಹೊರ ಬಿದ್ದಿದ್ದು, ಈ ಮಹಿಳೆ ಎಸ್‌ಪಿಜಿ ಪಡೆಯಲ್ಲಿ ಇಲ್ಲ ಎಂದು ಭದ್ರತಾ ಮೂಲಗಳು ತಿಳಿಸಿವೆ. ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ PSO ಆಗಿದ್ದಾರೆ. ಅಲ್ಲದೇ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಹಾಯಕ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.