
ಫೇಸ್ಬುಕ್, ಇನ್ಸ್ಟಾಗ್ರಾಮ್, ವಾಟ್ಸಾಪ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಅದ್ರಲ್ಲೂ ಹದಿಹರೆಯದವರು ಈ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಬಳಸ್ತಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದಿದೆ. ಇನ್ಸ್ಟಾಗ್ರಾಮ್,ಹದಿಹರೆಯದವರ ಮಾನಸಿಕ ಸ್ಥಿತಿ ಮೇಲೆ ಹೆಚ್ಚು ಪ್ರಭಾವ ಬೀರ್ತಿದೆ ಎಂಬ ಸಂಗತಿ ಹೊರ ಬಿದ್ದಿದೆ. ಫೇಸ್ಬುಕ್ ಆಂತರಿಕ ಅಧ್ಯಯನದಲ್ಲಿ ಈ ಫಲಿತಾಂಶ ಸಿಕ್ಕಿದೆ. ವಿಶೇಷವೆಂದ್ರೆ ಇನ್ಸ್ಟಾಗ್ರಾಮ್, ಫೇಸ್ಬುಕ್ ಒಡೆತನದ ಅಪ್ಲಿಕೇಷನ್ ಆಗಿದೆ.
ಫೇಸ್ಬುಕ್ ಅಧ್ಯಯನದಲ್ಲಿ ಇನ್ಸ್ಟಾಗ್ರಾಮ್, ಹದಿಹರೆಯದವರಿಗೆ ಹಾನಿಕಾರಕ ಎಂಬುದು ಪತ್ತೆಯಾಗಿದೆ. ಇನ್ಸ್ಟಾಗ್ರಾಮ್, ಯುವ ಬಳಕೆದಾರರ ಮೇಲೆ ಹೆಚ್ಚು ಪ್ರಭಾವ ಬೀರುತ್ತಿದೆ. ಈ ಬಗ್ಗೆ ಕಳೆದ ಮೂರು ವರ್ಷಗಳಿಂದ ಫೇಸ್ಬುಕ್ ಅಧ್ಯಯನ ನಡೆಸಿದೆ.
ಫೇಸ್ಬುಕ್ ವರದಿಯ ಪ್ರಕಾರ, ಹದಿಹರೆಯದವರು, ಆತ್ಮಹತ್ಯೆ ಬಗ್ಗೆ ಆಲೋಚಿಸುವಷ್ಟು ಇನ್ಸ್ಟಾಗ್ರಾಮ್ ಪ್ರಭಾವ ಬೀರುತ್ತಿದೆ. ಸುಮಾರು ಶೇಕಡಾ 13ರಷ್ಟು ಬ್ರಿಟಿಷ್ ಬಳಕೆದಾರರು ಮತ್ತು ಶೇಕಡಾ 6ರಷ್ಟು ಅಮೆರಿಕನ್ ಬಳಕೆದಾರರು ಇನ್ಸ್ಟಾಗ್ರಾಮ್ ನಲ್ಲಿ ಇದ್ರ ಬಗ್ಗೆ ಸರ್ಚ್ ಮಾಡಿದ್ದಾರೆ.
ವರದಿಯ ಪ್ರಕಾರ, ಶೇಕಡಾ 32ರಷ್ಟು ಹದಿಹರೆಯದ ಹುಡುಗಿಯರು ಇನ್ಸ್ಟಾಗ್ರಾಮ್, ದೇಹದ ಬಗ್ಗೆ ಕೆಟ್ಟ ಭಾವನೆ ಮೂಡಿಸುತ್ತದೆ ಎಂದಿದ್ದಾರೆ. ಯುಎಸ್ನಲ್ಲಿ ಶೇಕಡಾ 14ರಷ್ಟು ಹುಡುಗರು, ಇನ್ಸ್ಟಾಗ್ರಾಮ್, ನಮ್ಮ ಬಗ್ಗೆ ನಮಗೆ ಕೆಟ್ಟ ಭಾವನೆ ಮೂಡಿಸುತ್ತಿದೆ ಎಂದು ಹೇಳಿದ್ದಾರೆ. ಹದಿಹರೆಯದವರು ಸುಂದರವಾಗಿ ಕಾಣಲು ಬಯಸ್ತಾರೆ. ಆದ್ರೆ ಇನ್ಸ್ಟಾಗ್ರಾಮ್ ನಲ್ಲಿ ಸುಂದರವಾಗಿ ಕಾಣದೆ ಹೋದಲ್ಲಿ ಅವರು ಖಿನ್ನತೆಗೊಳಗಾಗ್ತಾರೆ. ಪ್ರತಿ 3 ಹುಡುಗಿಯರಲ್ಲಿ ಒಬ್ಬರಿಗೆ ಇದು ದೊಡ್ಡ ಸಮಸ್ಯೆಯಾಗಿದೆ.
ಸಂಶೋಧನೆ ಗಮನದಲ್ಲಿಟ್ಟುಕೊಂಡಿರುವ ಕಂಪನಿ, ಹದಿಹರೆಯದವರಿಗಾಗಿ ಹೊಸ ನಿಯಮ ಪರಿಚಯಿಸಲು ಮುಂದಾಗಿದೆ. ಅಪರಿಚಿತ ಮತ್ತು ಅನುಮಾನಾಸ್ಪದ ವಯಸ್ಕರಿಂದ ಹದಿಹರೆಯದವರನ್ನು ಸುರಕ್ಷಿತವಾಗಿರಿಸಲು ಕಂಪನಿಯು ಹಲವಾರು ಕಠಿಣ ಭದ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಹಾಗೆ 13 ವರ್ಷ ಮೇಲ್ಪಟ್ಟವರಿಗಾಗಿ ಹೊಸ ಆವೃತ್ತಿ ಬಿಡುಗಡೆ ಮಾಡುವ ಪ್ಲಾನ್ ನಲ್ಲಿದೆ ಇನ್ಸ್ಟಾಗ್ರಾಮ್.