ವಿಜಯಪುರ: ಫೇಸ್ಬುಕ್ ನಲ್ಲಿ ಯುವತಿ ಫೋಟೋ ಹಾಕಿ ಯುವಕನ ಅಶ್ಲೀಲ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ್ದ ಹಾಸನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಆಕೆಯ ಪತಿ ಪರಾರಿಯಾಗಿದ್ದಾನೆ.
ಫೇಸ್ ಬುಕ್ ಮೂಲಕ ಯುವಕನ ಸ್ನೇಹ ಬೆಳೆಸಿದ ನಂತರ ಆತನನ್ನು ಬ್ಲಾಕ್ಮೇಲ್ ಮಾಡಿ ಮಹಿಳೆ 39 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾಳೆ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಾಸರಹಳ್ಳಿ ಗ್ರಾಮದ ಮಂಜುಳಾ ಬಂಧಿತ ಆರೋಪಿ. ಆಕೆಯಿಂದ 6.64 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಮಂಜುಳಾ ಪತಿ ಸ್ವಾಮಿ ಬಸವರಾಜ ಪ್ರಕರಣದಲ್ಲಿ ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ.
ಸುಂದರ ಯುವತಿಯ ಫೋಟೋ ಹಾಕಿದ್ದ ಮಂಜುಳಾ ಸಿಂದಗಿ ತಾಲೂಕಿನ ಬಾಗಲೂರು ಗ್ರಾಮದ ಪರಮೇಶ್ವರ ಜೊತೆ ಸ್ನೇಹ ಬೆಳೆಸಿದ್ದಾಳೆ. ಇಬ್ಬರು ವಾಟ್ಸಾಪ್ ಮೂಲಕ ಚಾಟ್ ಮಾಡಿದ್ದಾರೆ. ನಂತರ ಪರಮೇಶ್ವರನಿಗೆ ವಿಡಿಯೋ ಕಾಲ್ ಮೂಲಕ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಮಂಜುಳಾ ಪುಸಲಾಯಿಸಿದ್ದಾಳೆ. ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡು ಬ್ಲಾಕ್ ಮೇಲ್ ಮಾಡಿ 39 ಲಕ್ಷ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾಳೆ.
ವಿಜಯಪುರ ಸಿಇಎನ್ ಠಾಣೆಗೆ ಪರಮೇಶ್ವರ ದೂರು ನೀಡಿದ್ದು, ಮಂಜುಳಾರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಈ ವಿಚಾರ ಗೊತ್ತಾಗಿದೆ. ಬ್ಲಾಕ್ ಮೇಲ್ ಮಾಡಿ ಪಡೆದ ಹಣದಿಂದ ಮಂಜುಳಾ ಮನೆ ನಿರ್ಮಿಸಿಕೊಂಡು, ಕಾರ್ ಖರೀದಿಸಿ ಐಷಾರಾಮಿಯಾಗಿ ಜೀವನ ನಡೆಸುತ್ತಿದ್ದರು ಎನ್ನುವುದು ಗೊತ್ತಾಗಿದೆ.