ಚಂಡೀಗಢ: ರೈತರು, ಕಾಂಗ್ರೆಸ್ ಕಾರ್ಯಕರ್ತರ ಕಣ್ಣು ಕಿತ್ತು ಹಾಕುತ್ತೇವೆ, ಕೈ ಕತ್ತರಿಸುತ್ತೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಮತ್ತು ರೈತರಿಗೆ ಬಿಜೆಪಿ ಸಂಸದ ಬೆದರಿಕೆ ಹಾಕಿದ್ದಾರೆ.
ರೋಹ್ಟಕ್ ಕ್ಷೇತ್ರದ ಬಿಜೆಪಿ ಸಂಸದ ಅರವಿಂದ್ ಶರ್ಮಾ ಈ ರೀತಿ ಬೆದರಿಕೆ ಹಾಕಿದವರು. ಮಾಜಿ ಸಚಿವ, ಬಿಜೆಪಿ ನಾಯಕ ಮನೀಶ್ ಗ್ರೋವರ್ ಅವರನ್ನು ವಿರೋಧಿಸಿದರೆ, ಯಾರಿಗಾದರೂ ಸರಿಯೇ, ಕಣ್ಣುಗಳನ್ನು ಕಿತ್ತು ಹಾಕುತ್ತೇವೆ ಎಂದು ಅರವಿಂದ ಶರ್ಮಾ ಬೆದರಿಕೆ ಹಾಕಿದ್ದಾರೆ.
ನಿನ್ನೆ ರೈತರು ಬಿಜೆಪಿ ನಾಯಕ ಮನೀಷ್ ಗ್ರೋವರ್ ಹಾಗೂ ಸಚಿವರಿಗೆ ಎಂಟು ಗಂಟೆಗಳ ಕಾಲ ದಿಗ್ಬಂಧನ ಹಾಕಿದ್ದರು. ರೈತರನ್ನು ಉದ್ಯೋಗವಿಲ್ಲದ ಮದ್ಯವ್ಯಸನಿಗಳು ಎಂದು ಹೇಳಿದ್ದಕ್ಕೆ ರೊಚ್ಚಿಗೆದ್ದ ರೈತರು ಎಂಟು ಗಂಟೆಗಳ ಕಾಲ ದಿಗ್ಬಂಧನ ಹಾಕಿದ್ದರು. ಈ ಹಿನ್ನೆಲೆಯಲ್ಲಿ ರೈತರು ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಅರವಿಂದ ಶರ್ಮಾ ಬೆದರಿಕೆ ಹಾಕಿದ್ದಾರೆ.
ರೋಹ್ಟಕ್ ನ ಕಿಲೋಯ್‌ನಲ್ಲಿರುವ ದೇವಾಲಯದ ಸಂಕೀರ್ಣದೊಳಗೆ ಗ್ರೋವರ್ ಮತ್ತು ಇತರ ಕೆಲವು ಬಿಜೆಪಿ ನಾಯಕರನ್ನು ಗಂಟೆಗಳ ಕಾಲ ಹಿಡಿದಿಟ್ಟುಕೊಂಡು ಹಲವಾರು ಗ್ರಾಮಸ್ಥರು ಮತ್ತು ರೈತರು ಹೊರಗೆ ಪ್ರತಿಭಟನೆ ನಡೆಸಿದ್ದರು. ಶುಕ್ರವಾರ ನಡೆದ ಘಟನೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿ ಬಿಜೆಪಿ ಶನಿವಾರ ರೋಹ್ಟಕ್‌ನಲ್ಲಿ ಪ್ರತಿಭಟನೆ ನಡೆಸಿದೆ.
ಈ ವೇಳೆ ಮಾತನಾಡಿದ ಅರವಿಂದ್ ಶರ್ಮಾ, ಹರಿಯಾಣದ ಮಾಜಿ ಸಚಿವ ಮನೀಶ್ ಗ್ರೋವರ್ ಅವರನ್ನು ಯಾರಾದರೂ ವಿರೋಧಿಸಲು ಪ್ರಯತ್ನಿಸಿದರೆ ಕಣ್ಣು ಕಿತ್ತು ಕೈ ಕತ್ತರಿಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.