ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಶಾಲೆಗಳ ಆರಂಭ ವಿಳಂಬವಾಗಿದ್ದರಿಂದ ಮಕ್ಕಳಿಗೆ ಆನ್ಲೈನ್ ಕ್ಲಾಸ್ ನಡೆಸಲಾಗಿದ್ದು, ಇದರಿಂದ ಮಕ್ಕಳಲ್ಲಿ ಕಣ್ಣಿನ ಸಮಸ್ಯೆ ಶೇಕಡ 30 ರಷ್ಟು ಹೆಚ್ಚಾಗಿದೆ. ಆನ್ಲೈನ್ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ದೃಷ್ಟಿ ಸಮಸ್ಯೆ ಶೇಕಡ 30 ರಷ್ಟು ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಕಣ್ಣಿನ ಸಮಸ್ಯೆ ಹೆಚ್ಚಾಗಿರುವುದು ಗೊತ್ತಾಗಿದೆ. ಕಣ್ಣಿನ ಸಮಸ್ಯೆ ಉಂಟಾದ ವಿದ್ಯಾರ್ಥಿಗಳು ಬೋರ್ಡ್ ಮೇಲೆ ಬರೆದಿರುವುದನ್ನು ಓದಲು ಕಷ್ಟಪಡುವಂತಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಮಕ್ಕಳು ಹೆಚ್ಚಾಗಿ ಮೊಬೈಲ್, ಟಿವಿ, ವಿಡಿಯೋ ಗೇಮ್ ಮೊದಲಾದ ಡಿಜಿಟಲ್ ಸಾಧನಗಳನ್ನು ವೀಕ್ಷಿಸಿದ್ದಾರೆ. ಇದರೊಂದಿಗೆ ಮೊಬೈಲ್, ಲ್ಯಾಪ್ಟಾಪ್, ಕಂಪ್ಯೂಟರ್ ನಲ್ಲಿ ಆನ್ ಲೈನ್ ಕ್ಲಾಸ್ ವೀಕ್ಷಿಸಿದ್ದರಿಂದ ಮಕ್ಕಳಲ್ಲಿ ಕಣ್ಣಿನ ದೃಷ್ಟಿ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಮೊಬೈಲ್, ಟಿವಿ, ಸೇರಿ ಡಿಜಿಟಲ್ ಸಾಧನಗಳನ್ನು ವೀಕ್ಷಿಸುವುದನ್ನು ಕಡಿಮೆ ಮಾಡಬೇಕಿದೆ. ಬೆಂಗಳೂರಿನ ನಾರಾಯಣ ನೇತ್ರಾಲಯದ ನಿರ್ದೇಶಕರಾದ ಡಾ. ಭುಜಂಗ ಶೆಟ್ಟಿ ಅವರು ನೀಡಿರುವ ಮಾಹಿತಿಯಂತೆ, ಮೊಬೈಲ್ ಅಥವಾ ಲ್ಯಾಪ್ಟಾಪ್ ಗಳನ್ನು ಹೆಚ್ಚು ಸಮಯ ನೋಡುವ ಅನಿವಾರ್ಯತೆ ಇದ್ದಾಗ ಪ್ರತಿ 20 ನಿಮಿಷದ ನಂತರ 20 ಅಡಿ ದೂರದ ವಸ್ತುವನ್ನು 20 ಸೆಕೆಂಡ್ ಕಾಲ ನಿರಂತರವಾಗಿ ವೀಕ್ಷಿಸಬೇಕು. ಮತ್ತೆ ಮೊಬೈಲ್ ಬಳಸಬಹುದು. ಪದೇಪದೇ ರೆಪ್ಪೆಗಳನ್ನು ಮಿಟುಕಿಸಬೇಕು ಎಂದು ಹೇಳಿದ್ದಾರೆ. ಕಣ್ಣಿನ ಸಮಸ್ಯೆ ಇದ್ದವರು ಆಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಪರಿಣಾಮ ಹೆಚ್ಚಾಗಬಹುದು ಎಂದು ಹೇಳಲಾಗಿದೆ.