ತುಮಕೂರು: 60 ವರ್ಷ ಮೇಲ್ಪಟ್ಟವರಿಗೆ ಜನವರಿಯಿಂದ ಉಚಿತ ನೇತ್ರ ತಪಾಸಣೆ ನಡೆಸಿ ಕನ್ನಡಕ ವಿತರಿಸುವ ಯೋಜನೆಯನ್ನು ಜನವರಿಯಲ್ಲಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.
ತುಮಕೂರಿನಲ್ಲಿ ನಾರಾಯಣ ನೇತ್ರಾಲಯದ ನಾರಾಯಣ ದೇವಾಲಯ, ಉಚಿತ ಕಣ್ಣಿನ ಚಿಕಿತ್ಸೆ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತ ನೇತ್ರ ಚಿಕಿತ್ಸೆ ನೀಡಲಾಗುವುದು. ಉಚಿತವಾಗಿ ನೇತ್ರ ತಪಾಸಣೆ ಮಾಡಿ ಕನ್ನಡ ವಿತರಿಸಲಾಗುವುದು. ಜನವರಿಯಲ್ಲಿ ಯೋಜನೆ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ನಾರಾಯಣ ನೇತ್ರಾಲಯದ ಡಾ. ಕೆ. ಭುಜಂಗ ಶೆಟ್ಟಿ ಅವರು ಮಾತನಾಡಿ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಉಚಿತ ಆಸ್ಪತ್ರೆ ತೆರೆಯಲು ಉದ್ದೇಶಿಸಿದ್ದು, ಗ್ರಾಮೀಣ ಬಡವರಿಗೆ ಗುಣಮಟ್ಟದ ಕಣ್ಣಿನ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು. ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ಆಸ್ಪತ್ರೆ ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.